ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿಎಂ ಕುಮಾರಸ್ವಾಮಿ

Update: 2018-09-11 13:35 GMT

ಮೈಸೂರು,ಸೆ.11: ರಾಜ್ಯ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಯಾರಿಂದಲೂ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಅಲುಗಾಡುತ್ತಿದೆ ಎಂಬುವುದು ಮಾಧ್ಯಮಗಳ ಸೃಷ್ಟಿ. ಯಾರದೋ ಮಾತನ್ನು ಕೇಳಿ ಮಾಧ್ಯಮಗಳು ಸುಳ್ಳು ಸುದ್ಧಿ ಪ್ರಕಟಿಸುತ್ತಿವೆ. ಸರ್ಕಾರ ಎಷ್ಟು ಸುಭದ್ರವಾಗಿದೆ ಅನ್ನೋದು ನನಗೆ ಗೊತ್ತಿದೆ. ಸುಮ್ಮನೆ ಇಲ್ಲ ಸಲ್ಲದ ಸುದ್ದಿ ಪ್ರಕಟಿಸಿ ಜನರಲ್ಲಿ ಗೊಂದಲ ಸೃಷ್ಟಿಮಾಡಬೇಡಿ. ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಪದವಿ ಹೋಗಬಹುದು, ಬಿಡಬಹುದು. ಅಧಿಕಾರ ಶಾಶ್ವತ ಅಲ್ಲ. ನಾವು ಮಾಡುವ ಕೆಲಸ ಮುಖ್ಯ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ದವಾಗಿ ದುಡಿಯುತ್ತಿದ್ದೇನೆ. ನಿಮ್ಮ ವರದಿಗಳು ಅಧಿಕಾರಿಗಳ ಉದಾಸೀನತೆಗೆ ಕಾರಣವಾಗಲಿದೆ. ಸರಕಾರ ಬೀಳುತ್ತದೆ ಎಂಬ ಮನೋಭಾವದಲ್ಲಿ ಅಧಿಕಾರಿಗಳು ಸಚಿವರ ಮತ್ತು ಶಾಸಕರ ಮಾತುಗಳನ್ನು ಕೇಳದೆ ದರ್ಬಾರ್ ಮಾಡುತ್ತಾರೆ. ಇಂತಹ ಸಂದರ್ಭಗಳಿಗೆ ಮಾಧ್ಯಮಗಳು ಅವಕಾಶ ನೀಡಬೇಡಿ ಎಂದು ಹೇಳಿದರು.

ಕಾಂಗ್ರೆಸ್‍ನಿಂದ ಹತ್ತು ಮಂದಿ ಹೋಗುತ್ತಾರಂತೆ, ಹೈದರಬಾದ್‍ನಲ್ಲಿ ಇದ್ದಾರಂತೆ ಎಂಬುದು ಸುಳ್ಳು. ಹೈದರಬಾದೂ ಇಲ್ಲ, ಸಿಖಂದರಬಾದು ಇಲ್ಲ. ಯಾರದೋ ಮಾತು ಕೇಳಿ ಗೌರಿ-ಗಣೇಶ ಹಬ್ಬಕ್ಕೆ ಸರಕಾರ ಪತನಗೊಳ್ಳಲಿದೆ ಎಂದು ಬರೆಯುತ್ತೀರಿ. ನಂತರ ಗಾಂಧಿ ಜಯಂತಿ, ದಸರಾ ಅನ್ನುತ್ತೀರಿ, ಸುಮ್ಮನೆ ಜನರಲ್ಲಿ ಗೊಂದಲ ಸೃಷ್ಟಿಮಾಡುವ ಕೆಲಸಮಾಡಬೇಡಿ ಎಂದು ಹೇಳಿದರು.

ಅಭಿವೃದ್ಧಿಗೂ ಸಾಲಮನ್ನಾಕ್ಕೂ ಸಂಬಂಧವಿಲ್ಲ: ರಾಜ್ಯದ ಅಭಿವೃದ್ದಿ ಹಣದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂಬ ವರದಿ ಸರಿಯಲ್ಲ, ಅಭಿವೃದ್ದಿಗೆ ಬಳಸಲಿರುವ 2.18 ಲಕ್ಷ ಕೋಟಿ ವಿವಿಧ ಇಲಾಖೆಗಳ ಅಭಿವೃದ್ದಿಗೆ ಮಾತ್ರ ಮೀಸಲಿಡಲಾಗಿದೆ. ಈ ಹಣದಿಂದ ರೈತರ ಸಾಲಮನ್ನಾ ಮಾಡುತ್ತಿಲ್ಲ, ರೈತರ ಸಾಲ ಮನ್ನಾಕ್ಕೆ ತೆರಿಗೆ ಹಣ ಬಳಸಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿನ ಸಾಲ ಮನ್ನಾವನ್ನು ತಿಂಗಳು ತಿಂಗಳು ಸ್ವಲ್ಪ ನೀಡಿ ತೀರಿಸಲಾಗುತ್ತಿದೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲು ನಾಲ್ಕು ಕಂತುಗಳನ್ನು ಕೇಳಲಾಗಿದೆ. ಅದರಲ್ಲೂ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನಾನು ಕೇಳಿರುವ ಅವಧಿಗಿಂತ ಬೇಗ ರಾಷ್ಟ್ರೀಕೃತ ಬ್ಯಾಂಕಿನ ಸಾಲ ತೀರಿಸಲಾಗುವುದು ಎಂದು ಹೇಳಿದರು.

ತೆರಿಗೆ ಹಣ ಸೋರಿಕೆಗೆ ಕಠಿಣ ನಿರ್ಧಾರ: ರಾಜ್ಯ ಸರ್ಕಾರಕ್ಕೆ ಬರಬೇಕಿರುವ ತೆರಿಗೆ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ವಸೂಲಿ ಮಾಡಲಾಗುವುದು. ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಗಮನಿಸಿ ಕಠಿಣ ನಿರ್ಧಾರ ಕೈಗೊಂಡು ಸರಕಾರಕ್ಕೆ ಬರಬೇಕಿರುವ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್, ಅಧ್ಯಾಪಕರಾದ ಪ್ರೊ.ಎಚ್.ಎಂ.ಬಸವರಾಜು, ಡಾ.ವಿಜಲಕ್ಷ್ಮಿ ಡಾ.ವಿಜಯ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು.

ಸರಕಾರದ ಆದೇಶಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಸರಕಾರದ ಆದೇಶಗಳನ್ನು ಸಮರ್ಪಕವಾಗಿ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಸರಕಾರ ಪತನಗೊಳ್ಳಲಿದೆ ಎಂಬ ಮಾಧ್ಯಮಗಳ ವರದಿಯಿಂದ ಅಧಿಕಾರಿಗಳು ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಬಾವ ತೋರಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರಕಾರ ಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರಕಾರಕ್ಕೆ ತೊಂದರೆ ಇಲ್ಲ. ನಾನು 30 ಜಿಲ್ಲೆಯನ್ನು ಗಮನಿಸುತ್ತಿದ್ದೇನೆ. ಎಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗಷ್ಟೇ ನಮ್ಮ ರಕ್ಷಣೆ.ಜಾತಿ, ಸಂಬಂಧದ ಹೆಸರಿನಲ್ಲಿ ಅಧಿಕಾರಿಗಳ ರಕ್ಷಣೆ ಇಲ್ಲ. ನನಗೆ ಅಭಿವೃದ್ದಿಯಷ್ಟೇ ಮುಖ್ಯ. ರಾಜ್ಯದ ಜನರ ಹಿತದೃಷ್ಟಿಯಿಂದ ಕೈಗೊಳ್ಳುವ ಹೊಸ ಯೋಜನೆಗಳನ್ನು ಪಾಲಿಸುವುದಷ್ಟೇ ಅಧಿಕಾರಿಗಳ ಕೆಲಸ. ಹಾಗಾಗಿ ಅಭಿವೃದ್ದಿ ವಿಚಾರದಲ್ಲಿ ಉದಾಸೀನತೆ ತೋರದೆ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News