ಡಿಮ್ಯಾಟ್ ರೂಪದಲ್ಲಿ ನೂತನ ಶೇರುಗಳ ವಿತರಣೆ: ಅನ್‌ಲಿಸ್ಟೆಡ್ ಕಂಪನಿಗಳಿಗೆ ಅ.2ರಿಂದ ಕಡ್ಡಾಯ

Update: 2018-09-11 13:53 GMT

ಹೊಸದಿಲ್ಲಿ,ಸೆ.11: ಅಕ್ರಮ ಹಣದ ಹರಿವಿಗೆ ಕಡಿವಾಣ ಹಾಕಲು ಪ್ರಯತ್ನಗಳನ್ನು ಮುಂದುವರಿಸಿರುವ ಸರಕಾರವು ಅನ್‌ಲಿಸ್ಟೆಡ್ ಅಥವಾ ಶೇರು ವಿನಿಮಯ ಕೇಂದ್ರಗಳಲ್ಲಿ ನೋಂದಣಿಯಾಗಿರದ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ನೂತನ ಶೇರುಗಳನ್ನು ಡಿಮ್ಯಾಟ್ ರೂಪದಲ್ಲಿ ವಿತರಿಸುವುದನ್ನು ಕಡ್ಡಾಯಗೊಳಿಸಿದ್ದು,ಅ.2ರಿಂದ ಇದು ಜಾರಿಗೊಳ್ಳಲಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮಂಗಳವಾರ ಹೊರಡಿಸಿರುವ ನಿರ್ದೇಶದಂತೆ ಈ ಕಂಪನಿಗಳು ಡಿಮ್ಯಾಟ್ ಅಥವಾ ವಿದ್ಯುನ್ಮಾನ ರೂಪದಲ್ಲಿ ಮಾತ್ರ ಶೇರುಗಳ ವರ್ಗಾವಣೆಯನ್ನು ಪ್ರಕ್ರಿಯೆಯನ್ನು ನಡೆಸಬೇಕು.

ಕಾರ್ಪೊರೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ,ಹೂಡಿಕೆದಾರರ ರಕ್ಷಣೆ ಮತ್ತು ಆಡಳಿತವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

 ಕಂಪನಿಗಳ ಕಾಯ್ದೆ,2013ರಡಿ ಕಳೆದ ಜೂನ್ ಅಂತ್ಯಕ್ಕೆ ಇದ್ದಂತೆ ದೇಶದಲ್ಲಿ 11.89 ಲಕ್ಷಕ್ಕೂ ಅಧಿಕ ಕಂಪನಿಗಳು ಸಕ್ರಿಯವಾಗಿದ್ದು,ಇವುಗಳಲ್ಲಿ 71,506 ಪಬ್ಲಿಕ್ ಲಿಮಿಟೆಡ್ ಕಂಪನಿಗಳಾಗಿವೆ. 200ಕ್ಕೂ ಅಧಿಕ ಶೇರುದಾರರನ್ನು ಹೊಂದಿರುವ ಕಂಪನಿಗಳನ್ನು ಪಬ್ಲಿಕ್ ಲಿಮಿಟೆಡ್ ಎಂದು ವರ್ಗೀಕರಿಸಲಾಗಿದ್ದು,ಇವು ಕಟ್ಟುನಿಟ್ಟಾದ ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಶೇರುಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದಿರುವುದರಿಂದ ಕಳೆದುಹೋಗುವಿಕೆ, ಕಳ್ಳತನ,ವಿರೂಪಗೊಳ್ಳುವಿಕೆ ಮತ್ತು ವಂಚನೆಯಂತಹ ಭೌತಿಕ ಶೇರು ಪ್ರಮಾಣಪತ್ರಗಳೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳು ನಿವಾರಣೆಯಾಗುತ್ತವೆ ಎಂದು ಸಚಿವಾಲಯವು ಹೇಳಿದೆ.

ಅಲ್ಲದೆ ಈ ಕ್ರಮವು ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ಬೇನಾಮಿ ಶೇರುಗಳಂತಹ ದುರ್ವ್ಯವಹಾರಗಳನ್ನು ತಡೆಯುವ ಮೂಲಕ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ ಎಂದೂ ಅದು ತಿಳಿಸಿದೆ.

ಅನ್‌ಲಿಸ್ಟೆಡ್ ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಶೇರುದಾರರ ದೂರುಗಳನ್ನು ಹೂಡಿಕೆದಾರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರವು ಇತ್ಯರ್ಥಗೊಳಿಸಲಿದೆ.

2014ರ ಕಂಪನಿಗಳ(ವಿವರಣಾ ಪತ್ರ ಮತ್ತು ಶೇರುಗಳ ಹಂಚಿಕೆ)ನಿಯಮಗಳನ್ನು ಸಚಿವಾಲಯವು ತಿದ್ದುಪಡಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News