ಸಾಲ ತೀರಿಸಿದ್ದರೂ ದಾಖಲೆಗಳನ್ನು ಮರಳಿಸದ ಎಕ್ಸಿಸ್ ಬ್ಯಾಂಕ್: ಗ್ರಾಹಕನಿಗೆ 50 ಲ.ರೂ.ಪರಿಹಾರ ಪಾವತಿಸುವಂತೆ ಆದೇಶ

Update: 2018-09-11 14:04 GMT

ಹೊಸದಿಲ್ಲಿ,ಸೆ.11: ಗ್ರಾಹಕನೋರ್ವ ಸಾಲ ಪಡೆಯುವಾಗ ಸಲ್ಲಿಸಿದ್ದ ದಾಖಲೆಗಳನ್ನು ಆತ ಸಾಲವನ್ನು ಮರುಪಾವತಿಸಿದ ಬಳಿಕವೂ ವಾಪಸ್ ಮಾಡಲು ವಿಫಲಗೊಂಡಿದ್ದಕ್ಕಾಗಿ ಆತನಿಗೆ 50 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಇತ್ಯರ್ಥ ಆಯೋಗ(ಎನ್‌ಸಿಡಿಆರ್‌ಸಿ)ವು ದೇಶದ ಬೃಹತ್ ಖಾಸಗಿ ಬ್ಯಾಂಕುಗಳಲ್ಲೊಂದಾಗಿರುವ ಎಕ್ಸಿಸ್ ಬ್ಯಾಂಕಿಗೆ ಆದೇಶಿಸಿದೆ. ಇದರೊಂದಿಗೆ ಗ್ರಾಹಕನಿಗೆ ಮಾನಸಿಕ ಬೇಗುದಿ ಮತ್ತು ಕಿರುಕುಳವನ್ನುಂಟು ಮಾಡಿದ್ದಕ್ಕಾಗಿ 50,000 ರೂ. ಮತ್ತು ಕಾನೂನು ವೆಚ್ಚವಾಗಿ 15,000 ರೂ.ಗಳನ್ನು ಪಾವತಿಸುವಂತೆಯೂ ಅದು ತಾಕೀತು ಮಾಡಿದೆ. ನಾಲ್ಕು ವಾರಗಳಲ್ಲಿ ಈ ಮೊತ್ತವನ್ನು ದೂರುದಾರರಿಗೆ ಪಾವತಿಸಬೇಕು, ವಿಫಲವಾದಲ್ಲಿ ವಾರ್ಷಿಕ ಶೇ.12 ಬಡ್ಡಿ ಅನ್ವಯವಾಗುತ್ತದೆ ಎಂದು ಅದು ತಿಳಿಸಿದೆ.

ದೂರುದಾರ ರಾಜೇಶ ಗುಪ್ತಾ ಅವರು 2012ರಲ್ಲಿ ಎಕ್ಸಿಸ್ ಬ್ಯಾಂಕಿನ ಫರೀದಾಬಾದ್ ಶಾಖೆಯಿಂದ 67 ಲ.ರೂ.ಗಳ ಸಾಲವನ್ನು ಪಡೆದುಕೊಂಡಿದ್ದು,2013ರಲ್ಲಿ ಅದನ್ನು ಸಂಪೂರ್ಣವಾಗಿ ಮರುಪಾವತಿಸಿ,ತನ್ನ ಸಾಲದ ಖಾತೆಯನ್ನು ಮುಕ್ತಾಯಗೊಳಿಸಿದ್ದರು. ಆದರೆ ಅವರು ಸಾಲ ಪಡೆದುಕೊಳ್ಳುವಾಗ ಬ್ಯಾಂಕಿಗೆ ನೀಡಿದ್ದ ಆಸ್ತಿ ದಾಖಲೆಗಳನ್ನು ವಾಪಸ್ ಮಾಡುವಲ್ಲಿ ಅದು ವಿಫಲಗೊಂಡಿತ್ತು.

ತನ್ನ ಬಳಿಯಿದ್ದ ಕೆಲವು ದಾಖಲೆಗಳನ್ನು ಗುಪ್ತಾಗೆ ಮರಳಿಸಿದ್ದೇನೆ. ಅಷ್ಟೇನೂ ಮಹತ್ವದ್ದಲ್ಲದ, ಕೇವಲ ರಸೀದಿಗಳಿದ್ದ ಇತರ ದಾಖಲೆಗಳು ಕಳೆದು ಹೋಗಿರುವುದರಿಂದ ಅವುಗಳನ್ನು ಮರಳಿಸಲು ತನಗೆ ಸಾಧ್ಯವಿಲ್ಲ ಎಂದು ಬ್ಯಾಂಕು ವಾದಿಸಿತ್ತು.

ಬ್ಯಾಂಕು ತನ್ನ ಗ್ರಾಹಕರಿಗೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು ನಿರ್ವಹಿಸುವಲ್ಲಿ ಮತ್ತು ಗ್ರಾಹಕರು ತನ್ನಲ್ಲಿ ನಂಬಿಕೆಯಿರಿಸಿ ನೀಡಿದ್ದ ದಾಖಲೆಗಳನ್ನು ವಾಪಸ್ ಮಾಡುವಲ್ಲಿ ವಿಫಲಗೊಂಡಿದೆ ಎಂದು ಆಯೋಗದ ಅಧ್ಯಕ್ಷೆ ನ್ಯಾ.ದೀಪಾ ಶರ್ಮಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News