ವಾಟ್ಸ್‌ಆ್ಯಪ್‌ನಲ್ಲಿ ಆಟವಾಡುವ ವೇಳೆ ತನ್ನ ಮೇಲೆಯೇ ಗುಂಡು ಹಾರಿಸಿ ಪ್ರಾಣಬಿಟ್ಟ ಯುವತಿ

Update: 2018-09-11 15:23 GMT

ಭೋಪಾಲ್, ಸೆ.11: ವಾಟ್ಸ್‌ಆ್ಯಪ್‌ನಲ್ಲಿ ರಶ್ಯನ್ ರೋಲೆಟ್ ಎಂಬ ಮಾರಣಾಂತಿಕ ಆಟವಾಡುವ ವೇಳೆ ಪೊಲೀಸ್ ಅಧಿಕಾರಿಯ ಮಗಳರೊಬ್ಬಳು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಅರವಿಂದ ಯಾದವ್ ಅವರ ಪುತ್ರಿಯಾಗಿರುವ 21ರ ಹರೆಯದ ಕರಿಶ್ಮಾ ಯಾದವ್ ಈ ರೀತಿ ದಾರುಣವಾಗಿ ಸಾವನ್ನಪ್ಪಿದ ಯುವತಿಯಾಗಿದ್ದಾಳೆ. ಘಟನೆ ನಡೆದ ವೇಳೆ ಕರಿಶ್ಮಾ ತನ್ನ ಗೆಳತಿ ನಝ್ಮಾ ಎಂಬಾಕೆ ಜೊತೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಮೂಲಕ ಮಾತನಾಡುತ್ತಿದ್ದರು. ಈ ವೇಳೆ ನಝ್ಮಿ ದಿಲ್ಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಝ್ಮಾಳ ವಿಚಾರಣೆ ನಡೆಸಿದ್ದು, ಕರಿಶ್ಮಾ ನನ್ನ ಜೊತೆ ಮೊಬೈಲ್‌ನಲ್ಲಿ ವಿಡಿಯೊ ಕರೆ ಮಾಡಿ ಮಾತನಾಡುತ್ತಿದ್ದಳು. ಈ ವೇಳೆ ಆಕೆಯ ಕೈಯಲ್ಲಿ ಪಿಸ್ತೂಲು ಇತ್ತು. ಆಕೆ ಅದನ್ನು ನನಗೆ ತೋರಿಸುತ್ತಾ, ಈ ಪಿಸ್ತೂಲಿನಲ್ಲಿ ಕೇವಲ ಒಂದು ಬುಲೆಟ್ ಇದೆ. ನಾನಿವತ್ತು ಸಾಯಬೇಕೆಂದು ಬರೆದಿದೆಯೇ ಎಂದು ನೋಡುವ ಎಂದು ತಿಳಿಸಿದ್ದಳು. ನಂತರ ಕರೆ ಕಟ್ ಆಗಿತ್ತು. ಬಹುಶಃ ಈ ವೇಳೆ ಆಕೆ ತನ್ನ ಮೇಲೆ ಗುಂಡು ಹಾರಿಸಿಕೊಂಡಿರಬೇಕು ಎಂದು ಆಕೆ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕರಿಶ್ಮಾಳ ಸಹೋದರ ಮಾರುಕಟ್ಟೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ಆತ ಮನೆಗೆ ವಾಪಸಾದಾಗ ಸಹೋದರಿಯನ್ನು ರಕ್ತದ ಮಡುವಿನಲ್ಲಿ ಕಂಡು ಆಘಾತಗೊಂಡಿದ್ದ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಶ್ಯನ್ ರೋಲೆಟ್ ಮೊಬೈಲ್‌ನಲ್ಲಿ ಲಭ್ಯವಿರುವ ಒಂದು ಮಾರಣಾಂತಿಕ ಆಟವಾಗಿದ್ದು ಇದರಲ್ಲಿ ಆಟಗಾರರು ತಮ್ಮ ಪಿಸ್ತೂಲಿನಲ್ಲಿ ಕೇವಲ ಒಂದು ಬುಲೆಟನ್ನು ಇಟ್ಟು, ಪಿಸ್ತೂಲನ್ನು ತಮ್ಮ ಹಣೆಯ ಮೇಲಿಟ್ಟು ಶೂಟ್ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News