ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ: ರಾಘವೇಶ್ವರ ಶ್ರೀಗಳ ಆಕ್ಷೇಪಣೆ ತಳ್ಳಿ ಹಾಕಿದ ಹೈಕೋರ್ಟ್

Update: 2018-09-11 16:19 GMT

ಬೆಂಗಳೂರು, ಸೆ.11: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತನಿಖಾಧಿಕಾರಿಗಳು ತನಿಖೆ ವೇಳೆ ಸಂಗ್ರಹಿಸಿದ್ದ ಸಾಕಷ್ಟು ದಾಖಲೆಗಳನ್ನು ದೋಷಾರೋಪ ಪಟ್ಟಿ ಸಲ್ಲಿಕೆ ವೇಳೆ ವಿಚಾರಣಾ ನ್ಯಾಯಾಲಯಕ್ಕೆ ಒದಗಿಸಿಲ್ಲ ಎಂಬ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಆಕ್ಷೇಪಣೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಈ ಕುರಿತಂತೆ ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಲು ತಿರಸ್ಕರಿಸಿದೆ.

ಅತ್ಯಾಚಾರ ಆರೋಪ ಪ್ರಕರಣದಿಂದ ಸ್ವಾಮೀಜಿ ಅವರನ್ನು ಕೈಬಿಟ್ಟಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಮತ್ತು ಸಂತ್ರಸ್ತೆ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಸ್ವಾಮೀಜಿ ಪರ ವಕೀಲರು ನ್ಯಾಯಪೀಠಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿದರು. ಆದರೆ, ನ್ಯಾಯಪೀಠ ಈ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ. ಈಗಾಗಲೇ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಪ್ರಕರಣದಿಂದ ಕೈಬಿಟ್ಟಿದೆ. ಈಗ ಪುನಃ ದಾಖಲೆಗಳ ಪರಿಶೀಲನೆ ಕೋರಿಕೆ ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News