ಶಾಲಾ ಕಾಲೇಜುಗಳ ಕಟ್ಟಡ ಅಭಿವೃದ್ಧಿಗೆ 1 ಸಾವಿರ ಕೋಟಿ ಅನುದಾನ: ಸಿಎಂ ಕುಮಾರಸ್ವಾಮಿ

Update: 2018-09-11 17:17 GMT

ಮೈಸೂರು,ಸೆ.11: ಅಧ್ಯಾಪಕರ  ಕೊರತೆ ಇರುವ ಕಾಲೇಜುಗಳಿಗೆ ಶೀಘ್ರದಲ್ಲಿಯೇ ಅಧ್ಯಾಪಕರ ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ಮಹಾರಾಣಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇನೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೆ. ಈಗಲೂ ಸಹ ಹೆಚ್ಚಿನ ಗಮನ ಕೊಡುತ್ತೇನೆ. ರಾಜ್ಯದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಕಾಲೇಜುಗಳ ಕಟ್ಟಡಗಳ ಪುನಶ್ಚೇತನ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದರು.

ಗ್ರಾಮಿಣ ಪ್ರೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಅಗತ್ಯವಿದೆ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲಾಗುವುದು ಎಂದು ಹೇಳಿದರು.

ಮಹರಾಣಿ ಕಾಲೇಜು ಸ್ಥಳಾಂತರವಿಲ್ಲ: ಮಹರಾಣಿ ಕಾಲೇಜು ಸ್ಥಳಾಂತರ ಮಾಡುವುದು ಬೇಡ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಕಾಲೇಜನ್ನು ಸ್ಥಳಾಂತರ ಮಾಡುವುದು ಬೇಡ, ಹೆಚ್ಚುವರಿ ಕೊಠಡಿಗಳ ಅಗತ್ಯವಿದ್ದರೆ ನಂಜರಾಜಬಹದ್ದೂರ್ ಛತ್ರದ ಆವರಣದಲ್ಲಿ ನಿರ್ಮಾಣ ಮಾಡಿ ಅದಕ್ಕೆ ಬೇಕಾಗುವ ಹಣವನ್ನು ನೀಡುವುದಾಗಿ ಹೇಳಿದರು.

ಮಹರಾಣಿ ಮಹಿಳಾ ಕಾಲೇಜು ರಾಜ್ಯದಲ್ಲಿ ಇತಿಹಾಸವನ್ನು ಹೊಂದಿದೆ. ಇಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಸ್ಥಾನಕ್ಕೇರಿದ್ದಾರೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ನೀವು ನೀಡಿರುವ ಎಲ್ಲಾ ಮನವಿಯನ್ನು ಈ ವರ್ಷದಲ್ಲೇ ಪೂರೈಸುವುದಾಗಿ ಹೇಳಿದರು.

ಗುಣಮಟ್ಟದ ಶಿಕ್ಷಣ ನೀಡಲು ಖಾಸಗಿ ಕಂಪನಿ ಜೊತೆ ಒಪ್ಪಂದ: ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಯಾವ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇರದ ಹಾಗೆ ನೋಡಿಕೊಳ್ಳಲು ಖಾಸಗಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದು, ನಂತರ ರಾಜ್ಯದ ಎಲ್ಲಾ ಶಾಲೆಗಳ ಕಡೆ ಗಮನಹರಿಸುವುದಾಗಿ ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿದವರು ಮೈಸೂರು ಅರಸರು. ಅವರು ಜಾತಿ ಧರ್ಮ ಎನ್ನದೆ ಎಲ್ಲರಿಗೂ ಶಿಕ್ಷಣವನ್ನು ನೀಡಿದರು.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News