ವಿವೇಕಾನಂದರ ಚಿಕಾಗೋ ಉಪನ್ಯಾಸಕ್ಕೆ ಸ್ವಾತಂತ್ರ್ಯ ದಿನಾಚರಣೆಯಷ್ಟೇ ಮಹತ್ವ: ಸ್ವಾಮಿ ವೀರೇಶಾನಂದ

Update: 2018-09-11 17:47 GMT

ತುಮಕೂರು,ಸೆ.11: ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 15ಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಉಪನ್ಯಾಸ ನೀಡಿದ 1893 ಸೆಪ್ಟೆಂಬರ್ 11ಕ್ಕೆ ಇದೆ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಯದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದ್ದಾರೆ.

ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು, 1947 ಆಗಸ್ಟ್ 15ರಂದು ಈ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಿದೆ. ಆದರೆ ಇದಕ್ಕೂ ಮುನ್ನ 1893ರ ಸೆಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೋದಲ್ಲಿ ಪಾಶ್ಚಿಮಾತ್ಯರಿಗೆ ಭಾರತದೆಡೆಗೆ ಇದ್ದ ನಿರ್ಲಕ್ಷಿತ ಧೋರಣೆಯನ್ನು ತೊಡೆದು ಹಾಕಿ ದೇಶದ ಪರಂಪರೆ, ಧಾರ್ಮಿಕತೆ, ಮೌಲ್ಯಗಳ ಬಗ್ಗೆ ತಮ್ಮ ಭಾಷಣದ ಮೂಲಕ ಗಮನ ಸೆಳೆದರು. ವಿವೇಕಾನಂದರ ಬಗ್ಗೆ ಅಧ್ಯಯನ ಮಾಡುವುದರಿಂದ ಹಠ, ಚಲ, ಶ್ರಮ ಸಂಸ್ಕೃತಿ, ಭಾರತೀಯ ಪರಂಪರೆಯ ಬಗ್ಗೆ ತಿಳಿಯಬಹುದಾಗಿದೆ. ವಿವೇಕಾನಂದರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿ ಹೇಳಬೇಕಾಗುತ್ತದೆ. ಇದಕ್ಕಾಗಿ ಶಿಕ್ಷಕರು ಅಧ್ಯಯನಶೀಲರಾಗಬೇಕು. ಪುಸ್ತಕಕ್ಕಿಂತ ಪಠ್ಯೇತರ ಸಂಗತಿಗಳ ಬಗ್ಗೆ ಮಕ್ಕಳಿಗೆ ಬೋಧಿಸಬೇಕಾದ ಅಗತ್ಯವಿದೆ ಎಂದರು. 

ಎಲ್ಲಾ ಧರ್ಮದವರು, ಸಹೋದರತ್ವದಿಂದ, ಪ್ರೀತಿಯಿಂದ ಒಟ್ಟಾಗಿ ಬದುಕುತ್ತಿರುವುದಕ್ಕೆ ಭಾರತ ಸಾಕ್ಷಿಯಾಗಿದೆ. ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಂಡರೆ ಇಂದಿನ ಯುವ ಪೀಳಿಗೆ ತನ್ನಲ್ಲಿರುವ ಆಂತರಿಕ ಶಕ್ತಿಯನ್ನು ಅರಿಯಲು ಸಾಧ್ಯವಾಗುತ್ತದೆ ಹಾಗೂ ಉತ್ತಮ ಮೌಲ್ಯಯುಕ್ತ ಬದುಕನ್ನು ಕಾಣಬಹುದು ಎಂದರು. 

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಿ.ಅನಿತಾ, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ದೇಶದ ಯುವ ಸಮುದಾಯ ಸರಿಯಾದ ದಿಕ್ಕಿನಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗರತ್ನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News