ಕಾಂಗ್ರೆಸ್ ಶಾಸಕರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ: ಮಾಜಿ ಶಾಸಕ ಜೀವರಾಜ್ ಆರೋಪ

Update: 2018-09-11 18:22 GMT

ಚಿಕ್ಕಮಗಳೂರು, ಸೆ.11: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಸಾರ್ವಜನಿಕರ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್. ಜೀವರಾಜ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ಬಾಳೆಹೊನ್ನೂರು ಪಟ್ಟಣದ ದಿನಿಸಿ ವ್ಯಾಪಾರಿ ವಿಲಾಸ್ ಕುಡುವ ಅವರ ಅಂಗಡಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅಂಗಡಿ ಮಾಲಕ ವಿಲಾಸ್ ಕುಡುವ ಅವರು ಗಣೇಶ ಹಬ್ಬದ ದಿನಸಿ ವಸ್ತುಗಳ ಪಟ್ಟಿ ಇದೆ. ಅದನ್ನು ಪ್ಯಾಕ್ ಮಾಡಿ ನಂತರ ಅಂಗಡಿ ಬಾಗಿಲು ಹಾಕುವುದಾಗಿ ತಿಳಿಸಿದ್ದಾರೆ. ಆಗ ಕಾಂಗ್ರೆಸ್ ಕಾರ್ಯಕರ್ತರು ವಿಲಾಸ್ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಇದರ ಸಿಸಿಟಿವಿ ದಾಖಲೆ ಮತ್ತು ಆಡಿಯೋ ಕೂಡ ಇದೆ. ಹಾಗೂ ಇದೇ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದರು.  ಅಲ್ಲದೇ, ಅಪೂರ್ವ ಸೌಹಾರ್ದ ಸಹಕಾರಿ ಸಂಘಕ್ಕೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ದಾಂದಲೆ ನಡೆಸಿದ್ದಾರೆ. ಅಪೂರ್ವ ಸೌಹಾರ್ದ ಸಹಕಾರಿ ಸಂಘದವರು ದೂರು ದಾಖಲಿಸಲು ಮುಂದಾದರೂ ಪೊಲೀಸರು ಅಂದು ಸಂಜೆ 6:30ರ ವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಅಂಗಡಿ ಮಾಲಕ ವಿಲಾಸ್ ಅವರು ತಮ್ಮ ಮೇಲಿನ ಹಲ್ಲೆ ಪ್ರಕರಣ ದಾಖಲಿಸಲು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಅವರ ದೂರು ದಾಖಲಿಸಿಕೊಂಡಿಲ್ಲ. ನಂತರ ಬಿಜೆಪಿ ವತಿಯಿಂದ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಶಾಸಕರು ಖುದ್ಧು ಪೊಲೀಸ್ ಠಾಣೆಗೆ ತೆರಳಿ ವಿಲಾಸ್ ಅವರ ವಿರುದ್ಧ ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ ಅವರು, ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳನ್ನು ಶಾಸಕರು ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ಅದೇ ರೀತಿ ಇತ್ತೀಚೆಗೆ ಜಯಪುರ ಸಮೀಪ ಗ್ರಾಮವೊಂದರಲ್ಲಿ ನಡೆದ ಅಂತರ್ ಜಾತಿ ವಿವಾಹದ ಹಿಂದೆ ನಡೆದ ಗುಂಪು ಘಷರ್ಣೆಯಲ್ಲಿ ಶಾಸಕರ ಪರೋಕ್ಷ ಕೈವಾಡವಿದೆ ಎಂಬ ಅನುಮಾನವಿದೆ. ಎನ್.ಆರ್.ಪುರದ ಸಮೀಪ ವ್ಯಕ್ತಿಯೊರ್ವರು ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದರು. ಆದರೆ ಕೆಲ ಅಮಾಯಕರ ಮೇಲೆ ಕೊಲೆ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದೆ ಶಾಸಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಡಿ.ಎನ್.ಜೀವರಾಜ್,  ಅಮಾಯಕರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತುಂಗಾ, ಭದ್ರಾ ನದಿ ಪ್ರವಾಹದಲ್ಲಿ ತಾಲೂಕಿನಲ್ಲಿ 3 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸು ಭೆಳೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದರ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಪ್ರಶ್ನಿಸದೇ ಕಾಲ ಹರಣ ಮಾಡಿದ್ದಾರೆ. ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಾದ ಶಾಸಕರು, ಅದನ್ನು ಬಿಟ್ಟು ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ಮಳೆಹಾನಿಯ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಗಮನ ಸೇಳೆಯುವ ಕೆಲಸ ಬಿಜೆಪಿ ಮಾಡಿದೆ. ಸಿ.ಎಂ. ಕುಮಾರಸ್ವಾಮಿ ಅವರು ಜಿಲ್ಲೆಗೆ ಖುದ್ಧು ಭೇಟಿನೀಡಿ ಪರಿಹಾರ ಘೋಷಣೆ ಮಾಡುವುದಾಗಿ ಹೇಳಿದ್ದರು. ಅವರ ಭೇಟಿ ದಿನಾಂಕವೂ ಮುಂದೂಡಲಾಗಿದೆ. ಮಳೆಯಿಂದ ಜಿಲ್ಲಾದ್ಯಂತ 500 ಕೋಟಿಗೂ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ರಾಜ್ಯ ಸರ್ಕಾರ ತುರ್ತುಗಿ 100 ಕೋಟಿಯಾದರೂ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ ಅವರು, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ತಾಲೂಕುಗಳನ್ನು ಅತೀವೃಷ್ಠಿ ತಾಲೂಕುಗಳೆಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು. 

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿ.ಎಸ್. ಲೋಕೇಶ್, ರಾಜಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News