ದಾವಣಗೆರೆ: ಜಿಲ್ಲಾ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

Update: 2018-09-11 18:32 GMT

ದಾವಣಗೆರೆ, ಸೆ.11: ಜಿಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಜಿ.ಪಂ ಆಧ್ಯಕ್ಷ ಕೆ.ಆರ್ ಜಯಶೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಆರಂಭದಲ್ಲಿ ಜಿ.ಪಂ ಅಧ್ಯಕ್ಷರು ಹಲವು ಇಲಾಖೆಗಳ ಮುಖ್ಯಸ್ಥರುಗಳು ಸಭೆಗೆ ಬಾರದಿರುವುದನ್ನು ಕಂಡು ಈ ರೀತಿ ಆದರೆ ಸಭೆ ನಡೆಸುವುದು ಯಾರಿಗೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು ಹಾಗೂ ಅಧಿಕಾರಿಗಳ ಗೈರು ಹಾಜರಿಗೆ ಅಥವಾ ಬದಲಿ ಸಿಬ್ಬಂದಿ ನೇಮಿಸಿರುವುದಕ್ಕೆ ಸಕಾರಣ ನೀಡಬೇಕು. ಈ ಕುರಿತು ಮುಂದಿನ ಸಭೆಯಲ್ಲಿ ವಿವರಣೆ ಸಹಿತ ಸಭೆಗೆ ಹಾಜರಾಗುವಂತೆ ತಿಳಿಸಿದರು. ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆಗಳ ಅನುಪಾಲನಾ ವರದಿಯನ್ನು ಅವಲೋಕಿಸಲಾಯಿತು. ಆರೋಗ್ಯ ಇಲಾಖೆಯು ಈ ಹಿಂದಿನ ಸಭೆಯಲ್ಲಿ ವ್ಯಕ್ತವಾದ ಪ್ರಶ್ನೆಗಳಿಗೆ ಸರಿಯಾದ ವಿವರಣೆ ನೀಡಿರುವುದಿಲ್ಲ ಎಂದರು. 

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸವಿತಾ ಮಾತನಾಡಿ, ಇಂದಿಗೂ ಜಗಳೂರು ಆಸ್ಪತ್ರೆಯಲ್ಲಿ ಔಷಧಿಗಳು ಹೊರಗಡೆ ಮಾರಾಟವಾಗುತ್ತಿದ್ದು, ಸ್ವಚ್ಚತೆ ಶುದ್ದ ಕುಡಿಯುವ ನೀರು, ಊಟದ ಶುಚಿತ್ವ ಯಾವುದೂ ಸರಿಯಾಗಿಲ್ಲ. ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ ಎಂದರೂ ಹಾಗೇ ಬಂದಿದ್ದೀರಿ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಡಾ. ಮಂಜುನಾಥ್ ಸ್ವಾಮಿ, ಸರ್ಕಾರಿ ಆಸ್ಪತ್ರೆಗಳ ಔಷಧಿಗಳನ್ನು ಹೊರಗೆ ಮಾರಲು ಬರುವುದಿಲ್ಲ. ಬೇಕಿದ್ದರೆ ತನಿಖೆ ಮಾಡೋಣ ಎಂದಾಗ, 'ನೀವೇ ಸಮಯ ನಿರ್ಧರಿಸಿ ನಾನು ಬರುತ್ತೇನೆ' ಎಂದು ಸದಸ್ಯೆ ಸವಿತಾ ಹೇಳಿದರು. 

ಜಿ.ಪಂ ಸದಸ್ಯ ಎಂ ಆರ್ ಮಹೇಶ್ ಮಾತನಾಡಿ, ಈ ಹಿಂದಿನ ಸಭೆಯಲ್ಲಿ ಗಿರಿರಾಜ ಕೋಳಿಗಳ ಬದಲಾಗಿ ಕುರಿಗಳನ್ನು ಕೊಡಲು ತೀರ್ಮಾನಿಸಲಾಗಿತ್ತು. ಆದರೂ ಅಧಿಕಾರಿಗಳು ನಮ್ಮ ಗಮನಕ್ಕೆ ತಾರದೇ ಗಿರಿರಾಜ ಕೋಳಿಗಳನ್ನು ನೀಡಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಕೋಳಿ ಮರಿಗಳನ್ನು ನೀಡಬೇಡಿ ಎಂದಾಗ ಈ ಹಿಂದಿನ ಸಭೆಯ ಆದೇಶವನ್ನು ಆಯುಕ್ತರಿಗೆ ತಿಳಿಸಲಾಗಿತ್ತು. ಅದಕ್ಕೆ ಆಯುಕ್ತರು ಗಿರಿರಾಜ ಕೋಳಿಗಳ ಬದಲಾಗಿ ಬೇರೆ ಪ್ರಾಣಿಗಳನ್ನು ಕೊಡಲು ಬರುವದಿಲ್ಲವೆಂದು ಆದೇಶಿಸಿದ್ದಾರೆ ಎಂದರು. ಸದಸ್ಯ ಮಹೇಶ್, ನಾವು ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುತ್ತೇನೆ. ಅಲ್ಲಿಯವರೆಗೆ ಗಿರಿರಾಜ ಕೋಳಿಗಳನ್ನು ನೀಡುವುದನ್ನು ತಡೆ ಹಿಡಿಯಿರಿ ಎಂದರು. 

ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಶಿವಕುಮಾರ್ ಮಾಹಿತಿ ನೀಡಿ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜೂನ್ 2018 ಮಾಹೆಯಲ್ಲಿ 14 ನೇ ಸುತ್ತಿನ ಕಾಲು ಬಾಯಿ ರೋಗದ ವಿರುದ್ದ ಲಸಿಕಾ ಕಾರ್ಯಕ್ರಮದಲ್ಲಿ 408950 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮತ್ತು 27197 ಕುರಿ, ಮೇಕೆಗಳಿಗೆ ಕರಳು ಬೇನೆ ಲಸಿಕೆ, 2860 ಜಾನುವಾರುಗಳಿಗೆ ಚಪ್ಪೆ ಬೇನೆ ಲಸಿಕೆ ನೀಡಲಾಗಿದೆ ಎಂದರು. 

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿ ಜಗಳೂರು ಗೊಲ್ಲರ ಹಟ್ಟಿ ಮತ್ತು ಹನುಮಂತಪುರ ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಪೈಪ್ ಲೈನ್ ಕೆಲಸ ಬಾಕಿ ಇದೆ. ಸದರಿ ಕಾಮಗಾರಿಗಳನ್ನು 15 ದಿನಗೊಳಗಾಗಿ ಪೂರ್ಣಗೊಳಿಸಲಾಗುವುದು ಎಂದರು. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ಲ ಸಭೆಗೆ ಮಾಹಿತಿ ನೀಡಿ 2018-19 ನೇ ಸಾಲಿನ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಚೀಲೂರು ಗ್ರಾಮದ ರೈತರಿಗೆ ಅವಶ್ಯವಿರುವ ಜ್ಯೋತಿ ಬ್ರ್ಯಾಂಡ್ ಬೀಜಗಳನ್ನು ವಿತರಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯಂತ್ರ ಚಾಲಿತ ಔಷಧಿ ಸಿಂಪರಣೆ ಯಂತ್ರಗಳನ್ನು ವಿತರಿಸಲಾಗಿದ್ದು, ಇವುಗಳಿಗೆ ರೈತರ ವಂತಿಗೆ ಬೇರೆ ಬೇರೆಯಾಗಿದ್ದು, ಅವುಗಳ ದರವನ್ನು ರೈತರ ಸಂಪರ್ಕ ಕೇಂದ್ರದಲ್ಲಿ ಪ್ರದರ್ಶಿಸಲಾಗಿದೆ ಎಂದರು.  

ಚನ್ನಗಿರಿ ಹಾಸ್ಟೆಲ್‍ಗಳಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಅಲ್ಲಿನ ತಾಪಂ ಅಧ್ಯಕ್ಷರೇ ಆರೋಪ ಮಾಡಿದ್ದಾರೆ. ಈ ಕುರಿತು ಅಲ್ಲಿಗೆ ಭೇಟಿ ನೀಡಿ ಶೀಘ್ರ ವರದಿ ನೀಡುವಂತೆ ಜಿ.ಪಂ ಅಧ್ಯಕ್ಷರು ತಾಕೀತು ಮಾಡಿದರು. 

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಇಲಾಖೆ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಆಯುಕ್ತರ ಸೂಚನೆಯ ಮೇರೆಗೆ ಪ್ರತಿ ವಿದ್ಯಾರ್ಥಿ ನಿಲಯಕ್ಕೆ 3 ಸಿಸಿ ಕ್ಯಾಮರಾ ಅವಡಿಸಲಾಗಿದೆ ಹಾಗೂ ನಿಲಯದ ಮೆನು ಚಾರ್ಟ್ ಪ್ರಕಾರ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದರು.   

 ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಯೋಜನಾಧಿಕಾರಿ ಬಸನಗೌಡ, ಮುಖ್ಯ ಲೆಕ್ಕಾಧಿಕಾರಿ ಆಂಜನೇಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News