ಹೊನ್ನಾಳಿ: ಒಂದೇ ಕುಟುಂಬದ ಐವರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Update: 2018-09-11 18:35 GMT

ಹೊನ್ನಾಳಿ,ಸೆ.11: ಕೌಟುಂಬಿಕ ಸಮಸ್ಯೆಯಿಂದ ನೊಂದ ಕುಟುಂಬವೊಂದರ ಐವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಸಂಭವಿಸಿದೆ.

ಕೂಲಂಬಿ ಗ್ರಾಮದ ಬೆನಕನಳ್ಳೇರ ಬಸವರಾಜಪ್ಪ(62) ಅವರ ಪತ್ನಿ ಸಾವಿತ್ರಮ್ಮ(55) ಪುತ್ರಿ ಕವಿತಾ(32) ಮೊಮ್ಮಕ್ಕಳಾದ ಹೇಮಂತ್(06) ಮತ್ತು ಗದ್ದಿಗೇಶ್(04) ಆತ್ಮಹತ್ಯೆಗೆ ಯತ್ನಿಸಿದವರು.

ವಿಷ ಸೇವಿಸಿದ ತಕ್ಷಣ ಗ್ರಾಮಸ್ಥರು ಬೆನಕನಳ್ಳೇರ ಬಸವರಾಜಪ್ಪ, ಸಾವಿತ್ರಮ್ಮ ಮತ್ತು ಕವಿತಾ ಅವರನ್ನು ದಾವಣಗೆರೆಯ ಸಿಜೆ ಆಸ್ಪತ್ರೆಗೆ ಹಾಗೂ ಹೇಮಂತ್, ಗದ್ದಿಗೇಶ್ ಅವರನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆನಕನಳ್ಳೇರ ಬಸವರಾಜಪ್ಪ, ಸಾವಿತ್ರಮ್ಮ ಮತ್ತು ಕವಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಹೇಮಂತ್, ಗದ್ದಿಗೇಶ್ ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಅವರ ಪೈಕಿ ಹೇಮಂತ್ ಸ್ಥಿತಿ ಗಂಭೀರವಾಗಿದೆ.

ಘಟನೆಗೆ ಕಾರಣ: ಬೆನಕನಳ್ಳೇರ ಬಸವರಾಜಪ್ಪ ಮತ್ತು ಸಾವಿತ್ರಮ್ಮ ಪುತ್ರಿ ಕವಿತಾ ಅವರನ್ನು ಹೊಳಲ್ಕೆರೆ ತಾಲೂಕಿನ ಬೋರಗೊಂಡನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ವಿವಾಹ ಮಾಡಿಕೊಡಲಾಗಿತ್ತು. ಕವಿತಾ ಪತಿ ಮನೆಯಲ್ಲಿ ಸಾಲ ಬಾಧೆ ಹಿನ್ನೆಲೆಯಲ್ಲಿ ಆತನ ಪಾಲಿಗೆ ಬಂದ ಬೋರಗೊಂಡನಹಳ್ಳಿ ಗ್ರಾಮದ ಸಮಸ್ತ ಆಸ್ತಿ ಮಾರಾಟ ಮಾಡಲಾಗಿತ್ತು. ಈ ಕಾರಣಕ್ಕೆ ಪತ್ನಿ ಕವಿತಾ ಅವರನ್ನು ಕೂಲಂಬಿ ಗ್ರಾಮಕ್ಕೆ ಕರೆತಂದು ಬಿಟ್ಟದ್ದರು. ಅಲ್ಲದೆ, ಮದುವೆ ವೇಳೆ ಕೊಟ್ಟಿದ್ದ ಅಲ್ಮೆರಾ ಮತ್ತಿತರ ಸಾಮಗ್ರಿ ಕೂಲಂಬಿ ಗ್ರಾಮಕ್ಕೆ ತರಲಾಗಿತ್ತು. ಈ ಘಟನೆಯಿಂದ ತೀವ್ರ ನೊಂದಿದ್ದ ಕುಟುಂಬ ಆತ್ಮಹತ್ಯೆಯ ಕಠಿಣ ನಿರ್ಧಾರ ತಳೆದಿತ್ತು ಎಂದು ತಿಳಿದುಬಂದಿದೆ.

ಹೊನ್ನಾಳಿ ಸಿಪಿಐ ಜೆ. ರಮೇಶ್ ಕೂಲಂಬಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News