ಮುಂಡಾಸು ಧರಿಸಿದ ದಲಿತ ನಾಯಕನ ತಲೆಯ ಚರ್ಮವನ್ನೇ ಸುಲಿದರು !

Update: 2018-09-12 07:42 GMT

ಧಭೋಪಾಲ್, ಸೆ. 12: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಮಹೋಬ ಎಂಬ ಗ್ರಾಮದಲ್ಲಿ  ಮುಂಡಾಸು ಧರಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ದಲಿತ ನಾಯಕರೊಬ್ಬರ ತಲೆಯ  ಚರ್ಮವನ್ನು ಚೂರಿಯಿಂದ ಮೂವರು ಸುಲಿದ ಆಘಾತಕಾರಿ ಘಟನೆ ವರದಿಯಾಗಿದ್ದು, ಸಂತ್ರಸ್ತ ವ್ಯಕ್ತಿ ಸರ್ದಾರ್ ಸಿಂಗ್ ಜಾಟವ್ (45) ಈಗ ಗಂಭೀರ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಜಾಟವ್ ಅವರು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರೂ ಆಗಿದ್ದಾರೆ. ಅವರ ತಲೆಯ ಚರ್ಮ ಸೀಳಿದ ವ್ಯಕ್ತಿಗಳು ಗುರ್ಜರ್ ಸಮುದಾಯದವರೆಂದು ತಿಳಿದು ಬಂದಿದೆ.

ಘಟನೆ ಸೆ. 3ರಂದು ನಡೆದಿದ್ದು ಆರೋಪಿಗಳು ಜಾಟವ್ ಆವರನ್ನು ಸುರೇಂದ್ರ ಗುರ್ಜರ್ ನ ಮನೆಗೆ ಯಾವುದೋ ನೆಪದಲ್ಲಿ ಕರೆದು ಅಲ್ಲಿ ಅವರನ್ನು ನಿಂದಿಸಿ ನಂತರ ತಲೆಯ ಚರ್ಮವನ್ನು ಸುಲಿದಿದ್ದರು.

ಜಾಟವ್ ಈಗ ಗಂಭೀರ ಸ್ಥಿತಿಯಲ್ಲಿ ಗ್ವಾಲಿಯರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಕುರಿತಂತೆ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ. ಮೂವರು ಆರೋಪಿಗಳ ವಿರುದ್ಧವೂ ಕೊಲೆಯತ್ನ ಪ್ರಕ್ರರಣ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಾಗಿದೆ.

ಯಾವತ್ತೂ ನೀಲಿ ಬಣ್ಣದ ಮುಂಡಾಸು ಧರಿಸುತ್ತಿದ್ದ ಜಾಟವ್‍ರನ್ನು ಕಟ್ಟಿ ಹಾಕಿ ಥಳಿಸಲಾಗಿತ್ತು ಎಂದು ಶಿವಪುರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ದಯಾಶಂಕರ್ ಗೌತಮ್ ಹೇಳಿದ್ದಾರೆ. ಪೊಲೀಸರು ಆರಂಭದಲ್ಲಿ ಜಾಟವ್ ದೂರನ್ನು  ಸ್ವೀಕರಿಸಲು ನಿರಾಕರಿಸಿದ್ದಾಗಿಯೂ  ಅವರು ಆರೋಪಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ನಿಯೋಗವೊಂದು ಶಿವಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಆರೋಪಿಗಳ ತಕ್ಷಣ ಬಂಧನಕ್ಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News