ಸಂತ್ರಸ್ತ ಭಗಿನಿ ಕೇಸ್ ವಾಪಸ್ ಪಡೆದರೆ 5 ಕೋಟಿ ರೂ. ನೀಡುವ ಆಮಿಷ: ಸೋದರನ ಆರೋಪ

Update: 2018-09-12 07:57 GMT

ಕೊಚ್ಚಿ, ಸೆ.12: ಕೇರಳದ ಕಾನ್ವೆಂಟಿನ ಭಗಿನಿಯೊಬ್ಬರ ಮೇಲೆ ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರ ವಿರುದ್ಧ ಕ್ರಮ  ಕೈಗೊಳ್ಳಲು ಪೊಲೀಸರು ವಿಳಂಬಿಸುತ್ತಿರುವ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಮುಂದುವರಿದಿದೆ. ಈ ನಡುವೆ ಸಂತ್ರಸ್ತೆ ಭಗಿನಿ ದೂರು ವಾಪಸ್ ಪಡೆದರೆ ಆಕೆಗೆ ರೂ 5 ಕೋಟಿ ಲಂಚದ ಆಮಿಷವೊಡ್ಡಲಾಗಿದೆ ಎಂದು ಆಕೆಯ ಸೋದರ ಆರೋಪಿಸಿದ್ದಾರೆ.

ಬಿಷಪ್ ಫ್ರಾಂಕೊ ಅವರ ಸಂಬಂಧಿ ಹಾಗೂ ಇತರ ಇಬ್ಬರು ಪಾದ್ರಿಗಳು ತನ್ನ ಸ್ನೇಹಿತನನ್ನು ಸಂಪರ್ಕಿಸಿ ಸಂತ್ರಸ್ತೆ ದೂರು ವಾಪಸ್ ಪಡೆದರೆ ರೂ 5 ಕೋಟಿ ನೀಡಲು ಸಿದ್ಧ ಎಂದಿದ್ದಾರೆ ಎಂದು ಸಂತ್ರಸ್ತೆಯ ಸೋದರ ಹೇಳಿದ್ದಾರೆ.

ಕೇರಳ ಹೈಕೋರ್ಟಿನಲ್ಲಿ ನಾಳೆ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಪೊಲೀಸರು ಉನ್ನತ ಮಟ್ಟದ ಸಭೆ ನಡೆಸಲಿದ್ದು, ಆರೋಪಿ ಬಿಷಪ್ ಗೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆಯಿದೆ. ಆರೋಪಿ ಬಿಷಪ್ ಆವರನ್ನು ಬಂಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪೊಲೀಸರು ಈ ಸಭೆಯಲ್ಲಿ ನಿರ್ಧರಿಸಲಿದ್ದಾರೆಂಬ ಬಗ್ಗೆ ಮಾಹಿತಿಯಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಕೇರಳ ಹೈಕೋರ್ಟ್ ಈಗಾಗಲೇ ಮಾಹಿತಿ ಕೋರಿದೆ. ಬಿಷಪ್ ಫ್ರಾಂಕೊ ಮುಲಕ್ಕಲ್ ತಮ್ಮ ಮೇಲೆ 2014-16ರ ನಡುವೆ 13 ಬಾರಿ ಅತ್ಯಾಚಾರವೆಸಗಿದ್ದಾರೆಂದು ಸಂತ್ರಸ್ತ ಭಗಿನಿ ಈಗಾಗಲೇ ಆರೋಪಿಸಿದ್ದಾರೆ. ತರುವಾಯ ಆಕೆಯನ್ನು ಬೆಂಬಲಿಸುವ ನಾಲ್ಕು ಮಂದಿ ಭಗಿನಿಯರು  ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಆರೋಪಿ ಬಿಷಪ್ ಅವರ ಬೆಂಬಲಕ್ಕೆ ನಿಂತಿರುವ ಮಿಷನರೀಸ್ ಆಫ್ ಜೀಸಸ್ ಕಾಂಗ್ರಿಗೇಶನ್  ಪ್ರತಿಭಟನಾನಿರತರ ಮೇಲೆ  ಹರಿಹಾಯ್ದಿದ್ದು  ಬಿಷಪ್ ಮತ್ತು ಚರ್ಚ್ ವಿರುದ್ಧ ಕೆಲ ಬಾಹ್ಯ ಶಕ್ತಿಗಳು ಸಂಚು   ಹೂಡಿವೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News