ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲರೂ ಒಂದಾಗಿ: ನಟ ಪ್ರಕಾಶ್ ರೈ

Update: 2018-09-12 11:34 GMT

ಹುಳಿಯಾರು,ಸೆ.12: ಶಿಕ್ಷಕರು, ಪೋಷಕರು, ಸಂಘಸಂಸ್ಥೆಗಳು ಮನಸ್ಸು ಮಾಡಿದರೆ ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯ. ಹಾಗಾಗಿ ಎಲ್ಲರೂ ಒಂದಾಗಿ ಬದಲಾವಣೆಗಾಗಿ ದುಡಿಯಬೇಕಿದೆ ಎಂದು ಖ್ಯಾತ ನಟ ಪ್ರಕಾಶ್ ರೈ ಹೇಳಿದರು.

ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಪಠ್ಯ ಬೋಧನೆ ಮಾಡುವ ಮೂಲಕ ತರಗತಿಗಳನ್ನು ಜೀವಂತವಾಗಿಟ್ಟುಕೊಂಡು ಶಾಲೆಗೆ ಮಕ್ಕಳು ಓಡೋಡಿ ಬರುವಂತೆಯೂ ಕಲಿಕೆಯಲ್ಲಿ ಲವಲವಿಕೆಯಿಂದ ತೊಡಗುವಂತೆಯೂ ಮಾಡಬೇಕಿದೆ. ಪೋಷಕರು ಶಾಲೆಗೆ ಸದಾ ಭೇಟಿ ನೀಡಿ ನ್ಯೂನತೆಗಳನ್ನು ಅರಿತು ತಾವೇ ಸ್ವಯಂ ಪ್ರೇರಣೆಯಿಂದ ಬಗೆಹರಿಸುವ ಜೊತೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆನ್ನು ಬಿದ್ದು ಶಾಲಾ ಅಭಿವೃದ್ಧಿ ಮಾಡಿಸಬೇಕಿದೆ. ಸಂಘ ಸಂಸ್ಥೆಗಳೂ ಸಹ ಕನಿಷ್ಠ ತಿಂಗಳಿಗೊಂದು ಪಠ್ಯೇತರ ಚಟುವಟಿಕೆ ಸಂಘಟಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾದಾಗ ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯ ಎಂದರು.

ಸರಕಾರಿ ಶಾಲೆಗಳ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 5 ಸರಕಾರಿ ಶಾಲೆಗಳನ್ನು ಪ್ರಕಾಶ್ ರಾಜ್ ಫೌಂಡೇಶನ್, ಚರಕ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಆಶ್ರಯದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 5 ಶಾಲೆಗಳಲ್ಲಿ ಹೊಯ್ಸಳಕಟ್ಟೆ ಸರಕಾರಿ ಶಾಲೆಯೂ ಒಂದಾಗಿದ್ದು, ಈಗಾಗಲೇ ಶಾಲೆಗೆ ರಂಗಭೂಮಿ ಶಿಕ್ಷಕರನ್ನು ನೇಮಿಸಲಾಗಿದೆ. ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ.  ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡೆ, ಸೇರಿದಂತೆ ಇತರ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಶಿಥಿಲಗೊಂಡಿರುವ ಕೊಠಡಿಗಳ ಅಭಿವೃದ್ಧಿ ಜತೆ ಶೌಚಾಲಯಗಳನ್ನು ಸರಿಪಡಿಸಲಾಗುವುದು. ಮಕ್ಕಳ ಇಂಗ್ಲಿಷ್ ಕಲಿಕೆಗೆ ಶಿಕ್ಷಕರು ಸೇರಿದಂತೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಲಾಗುವುದು. ಮಕ್ಕಳಿಗೆ ಪ್ರತಿ ತಿಂಗಳು ಮಗ್ಗಿ ಮಾಸ, ವ್ಯಾಕರಣ ಮಾಸ ಸೇರಿದಂತೆ ವಿವಿಧ ಪಠ್ಯವನ್ನು ಪರಿಚಯಿಸಲಾಗುವುದು. ಒಟ್ಟಾರೆ ಮುಂದಿನ 6 ತಿಂಗಳಲ್ಲಿ ಉತ್ತಮ ಶಾಲೆಯನ್ನಾಗಿ ಪರಿವರ್ತಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳು ಹಾಗೂ ಪೋಷಕರನ್ನು ಸೆಳೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಸಮಾನ ಶಿಕ್ಷಣ ಹೋರಾಟಗಾರ್ತಿ ಮಲ್ಲಿಗೆ, ಪ್ರಕಾಶ್ ರಾಜ್ ಫೌಂಡೇಶನ್‍ನ ದಿಶಾ, ದೀಪು, ಚಂದನ್, ಶೋಭನ್, ಕಸಾಪ ಅಧ್ಯಕ್ಷೆ ಎನ್.ಇಮದಿರಮ್ಮ, ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಯುವರಾಜ್, ಪದಾಧಿಕಾರಿಗಳಾದ ಗುರು, ಎಲ್.ಬಿ.ಮಂಜುನಾಥ್, ಕಲ್ಲೇನಹಳ್ಳಿ ಶಿವಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಜ್ಜಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ರಘುವೀರ್, ಎಚ್.ಆರ್.ಗಿರೀಶ್, ಚಿತ್ತಪ್ಪ, ಮುಖ್ಯ ಶಿಕ್ಷಕ ಪರಶಿವಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News