ಶಿವಮೊಗ್ಗ: ರೌಡಿ ಶೀಟರ್ ಹತ್ಯೆ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ

Update: 2018-09-12 12:34 GMT
ಕೊಲೆಗೀಡಾದ ಮಾರ್ಕೆಟ್ ಗಿರಿ

ಶಿವಮೊಗ್ಗ, ಸೆ. 12: ರೌಡಿ ಶೀಟರ್ ಹಾಗೂ ಜೆಡಿಎಸ್ ಪಕ್ಷದ ಮುಖಂಡ ಮಾರ್ಕೆಟ್ ಗಿರಿ (35) ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಈ ತಂಡವು ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಹಂತಕರೆ ಸೆರೆಗೆ ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದೆ. 

ಎದುರಾಳಿ ರೌಡಿ ತಂಡ ಈ ಹತ್ಯೆಯಲ್ಲಿ ಭಾಗಿಯಾಗಿರುವ ಖಚಿತ ಮಾಹಿತಿ ಕಲೆ ಹಾಕಿರುವ ಪೊಲೀಸ್ ತಂಡ, ಹಂತಕರ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದೆ. ಇಷ್ಟರಲ್ಲಿಯೇ ಹಂತಕರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಘಟನೆ ಹಿನ್ನೆಲೆ: ಮಂಗಳವಾರ ರಾತ್ರಿ ಸರಿಸುಮಾರು 9.50 ರ ವೇಳೆಗೆ ನಗರದ ಜ್ಯೂವೆಲ್‍ರಾಕ್ ಹೋಟೆಲ್ ಎದುರಿನ ರಸ್ತೆಯ, ಸೂರ್ಯ ಕಂಫರ್ಟ್ ಹೋಟೆಲ್ ಪಕ್ಕದ ರಸ್ತೆಯಲ್ಲಿ ಮಾರ್ಕೆಟ್ ಗಿರಿಯ ಬರ್ಬರ ಹತ್ಯೆ ನಡೆಸಲಾಗಿತ್ತು. ಗಿರಿಯು ಮೂರ್ನಾಲ್ಕು ಸ್ನೇಹಿತರ ಜೊತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ವೇಳೆ, ವಾಹನವೊಂದರಲ್ಲಿ ಆಗಮಿಸಿದ್ದ ಸುಮಾರು ನಾಲ್ಕಕ್ಕೂ ಅಧಿಕ ಜನರಿದ್ದ ಮುಸುಕುಧಾರಿಗಳ ತಂಡ ದಾಳಿ ನಡೆಸಿತ್ತು. 

ಹಂತಕರ ತಂಡವು ಗಿರಿಯನ್ನು ಕಾರಿನಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ, ಭೀಕರವಾಗಿ ಹತ್ಯೆ ಮಾಡಿತ್ತು. ಈ ವೇಳೆ ಗಿರಿಯ ಜೊತೆಯಲ್ಲಿದ್ದ ಆತನ ಓರ್ವ ಸ್ನೇಹಿತನಿಗೂ ಗಾಯವಾಗಿದ್ದು, ಉಳಿದವರು ಕೂದಲೆಳೆ ಅಂತರದಲ್ಲಿ ದಾಳಿಯಿಂದ ತಪ್ಪಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಹತ್ಯೆಯ ನಂತರ ಹಂತಕರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳೊಂದಿಗೆ ತಾವು ಆಗಮಿಸಿದ್ದ ವಾಹನದಲ್ಲಿ ಪರಾರಿಯಾಗಿದ್ದರು. 

ತಲ್ಲಣ: ಹಂತಕರು ಮಾರಕಾಸ್ತ್ರಗಳಿಂದ ಮನಸೋಇಚ್ಚೆ ನಡೆಸಿದ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಗಿರಿ ಸ್ಥಳದಲ್ಲಿಯೇ ಅಸುನೀಗಿದ್ದ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರು.  
ಘಟನಾ ಸ್ಥಳದಲ್ಲಿ ರಾತ್ರಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನೂರಾರು ಜನ ಜಮಾಯಿಸಿದ್ದರು. ಮೃತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹಾಗೆಯೇ ಈ ಹತ್ಯೆ ಪ್ರಕರಣವು ಸ್ಥಳೀಯ ನಾಗರೀಕರಲ್ಲಿ ತಲ್ಲಣ ಉಂಟು ಮಾಡಿತ್ತು. 

ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ?
ರೌಡಿ ಮಾರ್ಕೆಟ್ ಗಿರಿಯ ಹತ್ಯೆಗೆ ಹಳೇಯ ವೈಷಮ್ಯವೇ ಕಾರಣವಾಗಿದ್ದು, ಎದುರಾಳಿ ರೌಡಿ ತಂಡ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಸವಾರ್‍ಲೈನ್ ರಸ್ತೆಯಲ್ಲಿ ನಡೆದ ರೌಡಿ ಶೀಟರ್ ಓರ್ವನ ಹತ್ಯೆಯ ಹಿನ್ನೆಲೆಯಲ್ಲಿ ಗಿರಿಯ ಹತ್ಯೆ ನಡೆದಿದೆ. ಎರಡು ಹತ್ಯೆ ಪ್ರಕರಣಗಳಲ್ಲಿ ಜೈಲು ಸೇರಿದ್ದ ರೌಡಿಯು ಇತ್ತೀಚೆಗೆ ಜಾಮೀನನ ಮೇಲೆ ಹೊರಬಂದಿದ್ದ. ಸಹೋದರ ಹತ್ಯೆ ಪ್ರತೀಕಾರವಾಗಿ ಈತ ತನ್ನ ಸಹಚರರ ಜೊತೆ ಸೇರಿಕೊಂಡು ಗಿರಿಯ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಪೊಲೀಸ್ ತನಿಖೆಯ ನಂತರವಷ್ಟೆ ಸತ್ಯಾಂಶ ತಿಳಿದುಬರಬೇಕಾಗಿದೆ. 

ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಜೈಲು ಸೇರಿದ್ದ!
ಈ ಹಿಂದೆ ಶಿವಮೊಗ್ಗ ನಗರದ ಡಿ.ಸಿ.ಸಿ. ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿದ್ದ 62 ಕೋಟಿ ರೂ. ಮೌಲ್ಯದ ಗೋಲ್ಡ್ ಲೋನ್ ಹಗರಣದಲ್ಲಿಯೂ ರೌಡಿ ಮಾರ್ಕೆಟ್ ಗಿರಿಯ ಹೆಸರು ಕೇಳಿಬಂದಿತ್ತು. ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನನ ಮೇಲೆ ಹೊರಬಂದಿದ್ದ. ತದನಂತರ ಹಗರಣದ ಆರೋಪದಿಂದ ಮುಕ್ತಗೊಂಡಿದ್ದ ಎನ್ನಲಾಗಿದೆ. 

ದೊಡ್ಡಪೇಟೆ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿದ್ದ ಮಾರ್ಕೆಟ್ ಗಿರಿಯು, ಪ್ರಸ್ತುತ ರೌಡಿಸಂ ಕೃತ್ಯದಿಂದ ದೂರ ಉಳಿದಿದ್ದ. ಯಾವುದೇ ಅಪರಾಧ ಕೃತ್ಯಗಳಲ್ಲಿ ಆತ ಭಾಗಿಯಾಗಿರಲಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಜೆಡಿಎಸ್ ಪಕ್ಷಕ್ಕೂ ಸೇರ್ಪಡೆಯಾಗಿದ್ದ. ವಿನೋಬನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. 

ಪೊಲೀಸ್ ಇಲಾಖೆಯ ವೈಫಲ್ಯ!
ರವಿ ಡಿ. ಚೆನ್ನಣ್ಣವರ್ ಎಸ್.ಪಿ.ಯಾಗಿದ್ದ ವೇಳೆ ಶಿವಮೊಗ್ಗ ನಗರದಲ್ಲಿ ರೌಡಿಸಂ ಚಟುವಟಿಕೆ ಸಂಪೂರ್ಣ ಸ್ತಬ್ದವಾಗಿತ್ತು. ಪೊಲೀಸರೆಂದರೇ ಪಾತಕಿಗಳು ಬೆಚ್ಚಿ ಬೀಳುವಂತಹ ಸ್ಥಿತಿಯಿತ್ತು. ಆದರೆ ಪ್ರಸ್ತುತ ಈ ಸ್ಥಿತಿಯಿಲ್ಲವಾಗಿದೆ. ಪೊಲೀಸರ ಬಗ್ಗೆ ಪಾತಕಿಗಳಿಗೆ ಯಾವುದೇ ಭಯವಿಲ್ಲವಾಗಿದೆ. ಈ ಕಾರಣದಿಂದ ದಿನದಿಂದ ದಿನಕ್ಕೆ ನಗರದಲ್ಲಿ ರೌಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾತಕಿಗಳು ನಾನಾ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಓ.ಸಿ. ಸೇರಿದಂತೆ ಹತ್ತು ಹಲವು ಕಾನೂನುಬಾಹಿರ ಕೃತ್ಯಗಳು ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News