ಸಮ್ಮಿಶ್ರ ಸರಕಾರಕ್ಕೆ ನಮ್ಮಿಂದ ಧಕ್ಕೆಯಾಗುವುದಿಲ್ಲ: ಸತೀಶ್ ಜಾರಕಿಹೊಳಿ

Update: 2018-09-12 12:37 GMT

ಬೆಂಗಳೂರು, ಸೆ.12: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ನಮ್ಮಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ಕೊಡಿಸುವುದು ನಮ್ಮ ಉದ್ದೇಶ. ನಮ್ಮಲ್ಲಿ ಸಣ್ಣಪುಟ್ಟ ಗೊಂದಲಗಳಿವೆ ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಥವಾ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಮ್ಮನ್ನು ಸಂಪರ್ಕಿಸಿ ಯಾವುದೇ ಚರ್ಚೆ ನಡೆಸಿಲ್ಲ ಎಂದ ಅವರು, ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಸಂಬಂಧ ಶಿವಕುಮಾರ್ ಬಂದು ನಮ್ಮ ಜೊತೆ ಮಾತುಕತೆ ನಡೆಸಿದರೆ ಎಲ್ಲವೂ ಒಳ್ಳೆಯದಾಗಲಿದೆ ಎಂದರು.

ಬೆಳಗಾವಿ ರಾಜಕೀಯದಲ್ಲಿ ಶಿವಕುಮಾರ್ ಬಹಳಷ್ಟು ಬಾರಿ ಹಸ್ತಕ್ಷೇಪ ಮಾಡಿದ್ದಾರೆ. ಅದೆಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ವರ್ಗಾವಣೆ ವಿಚಾರದಲ್ಲೂ ಹಸ್ತಕ್ಷೇಪವಾಗಿದೆ. ಮುಂದಿನ ದಿನಗಳಲ್ಲಿ ಅವರು ಈನ ರೀತಿ ಹಸ್ತಕ್ಷೇಪ ಮಾಡದೆ ಇದ್ದರೆ ತುಂಬಾ ಒಳ್ಳೆಯದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಶಿವಕುಮಾರ್ ಈವರೆಗೆ ನನಗೆ ಕರೆ ಮಾಡಿಲ್ಲ. ಒಂದು ವೇಳೆ ಅವರು ಕರೆ ಮಾಡಿದರೆ ನಾನು ಮಾತನಾಡುತ್ತೇನೆ. ಪರಸ್ಪರ ಮಾತುಕತೆ ನಡೆಸಲು ಯಾವುದೇ ತೊಂದರೆ ಇಲ್ಲ, ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ ಎಂದು ಅವರು ಹೇಳಿದರು.

ಬೆಳಗಾವಿಗೆ ಬರಲು ಶಿವಕುಮಾರ್‌ಗೆ ಅನ್ಯ ಮಾರ್ಗಗಳಿವೆ. ಬೆಳಗಾವಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಸಂಬಂಧ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಬೇಕು. ನಾನೊಬ್ಬನೇ ಅಲ್ಲ, ರಮೇಶ್ ಜಾರಕಿಹೊಳಿ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡರೆ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ತಮ್ಮನ್ನು ಭೇಟಿ ಮಾಡಿ ಚರ್ಚಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಹಳೆಯ ಸ್ನೇಹಿತರು. ಸುಧಾಕರ್, ಎಂಟಿಬಿ ನಾಗರಾಜ್, ಎಂ.ಬಿ.ಪಾಟೀಲ್ ಎಲ್ಲ ಒಂದೇ ಗುಂಪಿನವರು. ಇವತ್ತು ಎಂ.ಬಿ.ಪಾಟೀಲ್‌ರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.

ನಾವೆಲ್ಲ ಸಮಾನಮನಸ್ಕರು, ಪರಸ್ಪರ ಭೇಟಿ ಮಾಡುವುದು ಗುಂಪುಗಾರಿಕೆಯಲ್ಲ. ಎಲ್ಲ ಪಕ್ಷಗಳಲ್ಲೂ ಅವರದೇ ಆದಂತಹ ಗುಂಪುಗಳು ಇರುತ್ತವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿಯೂ ಅಂತಹ ಗುಂಪುಗಳಿವೆ. ಆದರೆ, ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದೇ ಗುಂಪು ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News