ಸ್ಪೋಟಕ ಸಂಗ್ರಹ ಪ್ರಕರಣದ ಆರೋಪಿಯೇ ಅಮೋಲ್ ಕಾಳೆ ಡೈರಿಯಲ್ಲಿದ್ದ ‘ಮೆಕ್ಯಾನಿಕ್’

Update: 2018-09-12 12:41 GMT

ಬೆಂಗಳೂರು,ಸೆ.12: ಸ್ಪೋಟಕ ಸಂಗ್ರಹದಲ್ಲಿ ಭಾಗಿಯಾಗಿದ್ದ ಮೂಲಭೂತವಾದಿ ಹಿಂದುತ್ವ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ಜಳಗಾಂವ್‌ನಿಂದ ಬಂಧಿಸಿರುವ ಆಟೊಮೊಬೈಲ್ ಮೆಕ್ಯಾನಿಕ್ ವಾಸುದೇವ ಸೂರ್ಯವಂಶಿ(29)ಯೇ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಅಮೋಲ್ ಕಾಳೆಯ ಡೈರಿಯಲ್ಲಿ ಉಲ್ಲೇಖಿಸಲಾಗಿರುವ ‘ಮೆಕ್ಯಾನಿಕ್’ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಜನಜಾಗೃತಿ ಸಮಿತಿ(ಎಚ್‌ಜೆಎಸ್)ಯ ಮಾಜಿ ಸಂಚಾಲಕನಾಗಿರುವ ಪುಣೆ ನಿವಾಸಿ ಕಾಳೆ ಎಚ್‌ಜೆಎಸ್ ಜೊತೆ ನಂಟು ಹೊಂದಿರುವ ಗುಪ್ತ ಹಿಂದುತ್ವ ಗುಂಪಿನ ಪ್ರಮುಖ ನಾಯಕನೆನ್ನಲಾಗಿದೆ.

 ಮಹಾರಾಷ್ಟ್ರ ಎಟಿಎಸ್‌ನಿಂದ ಬಂಧಿತ ಸೂರ್ಯವಂಶಿಯನ್ನು ಕಾಳೆಯ ಡೈರಿಯಲ್ಲಿ ಉಲ್ಲೇಖಿಸಲಾಗಿರುವ ‘ಮೆಕ್ಯಾನಿಕ್’ಎಂದು ಗುರುತಿಸಲಾಗಿದೆ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ(ಸಿಟ್)ದಲ್ಲಿಯ ಮೂಲಗಳು ತಿಳಿಸಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯ ಶಿಬಿರಗಳಲ್ಲಿ ಗನ್‌ಗಳ ಬಳಕೆಯ ತರಬೇತಿಯನ್ನು ಪಡೆದಿದ್ದ ಡಝನ್‌ಗೂ ಅಧಿಕ ಯುವಕರಲ್ಲಿ ಸೂರ್ಯವಂಶಿಯೂ ಒಬ್ಬನಾಗಿದ್ದ ಮತ್ತು ಮತ್ತು ಆತ ಗುಂಪಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಅವು ಹೇಳಿವೆ.

‘ಮೆಕ್ಯಾನಿಕ್’ ಬೈಕ್‌ಗಳ ಕಳ್ಳತನದಲ್ಲಿ ನಿಪುಣ ಎಂದು ಇತರ ಶಂಕಿತರು ಹೇಳಿದ್ದು, ವಿಚಾರವಾದಿ ನರೇಂದ್ರ ದಾಭೋಲ್ಕರ್,ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ, ಕನ್ನಡ ವಿದ್ವಾಂಸ ಹಾಗೂ ವಿಚಾರವಾದಿ ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗಳಿಗಾಗಿ ಗುಪ್ತ ಹಿಂದುತ್ವ ಗುಂಪು ಸೂರ್ಯವಂಶಿಯನ್ನು ಯಾವುದೇ ರೀತಿಯಲ್ಲಿ ಬಳಸಿಕೊಂಡಿತ್ತೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 ಕಳೆದ ಮೇ ತಿಂಗಳಲ್ಲಿ ಬಂಧಿಸಲ್ಪಟ್ಟಿರುವ ಕಾಳೆಯ ಡೈರಿಯಲ್ಲಿನ ಉಲ್ಲೇಖಗಳು ಮತ್ತು ಗುಂಪಿನ ಸದಸ್ಯರಿಗೆ ಶಸ್ತ್ರಾಸ್ತ್ರಗಳ ತರಬೇತಿ ಒದಗಿಸುವುದರಲ್ಲಿ ಭಾಗಿಯಾಗಿದ್ದರೆನ್ನಲಾದ ವ್ಯಕ್ತಿಗಳು ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿರುವ ಮಾಹಿತಿಗಳು ಮೂರು ವರ್ಷಗಳ ಹಿಂದೆ ನಡೆಸಲಾಗಿದ್ದ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳಿಗೆ ಓರ್ವ ’ಮೆಕ್ಯಾನಿಕ್’ ಹಾಜರಾಗಿದ್ದ ಎನ್ನುವುದನ್ನು ಬೆಟ್ಟು ಮಾಡುತ್ತಿವೆ.

ಗುಪ್ತ ಹಿಂದುತ್ವ ಗುಂಪಿನ ಕ್ರಿಮಿನಲ್ ಚಟುವಟಿಕೆಗಳನ್ನು ಬಯಲಿಗೆಳೆಯುವಲ್ಲಿ ಕಾಳೆಯ ಡೈರಿ ಸಿಟ್ ಪಾಲಿನ ಪ್ರಮುಖ ಸಾಧನವಾಗಿದೆ. ಗುಂಪಿನ ಸದಸ್ಯರ ಗುರುತುಗಳನ್ನು ರಕ್ಷಿಸಲು ಕಾಳೆ ಅವರಿಗೆಲ್ಲ ಅಡ್ಡಹೆಸರುಗಳನ್ನು ನೀಡಿದ್ದ ಎನ್ನುವುದು ಗೌರಿ ಲಂಕೇಶ್ ಹತ್ಯೆ ಕುರಿತು ಸಿಟ್ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಯುವಕ ನಮ್ಮ ಚಟುವಟಿಕೆಗಳ ಭಾಗವಾಗಲು ಸೂಕ್ತ ಎಂದು ನಮಗೆ ಖಚಿತವಾದರೆ ನಮ್ಮೊಂದಿಗೆ ಸಂವಹನಕ್ಕೆ ಮಾತ್ರ ಬಳಸಲು ಮೊಬೈಲ್ ಫೋನ್‌ವೊಂದನ್ನು ಆತನಿಗೆ ಒದಗಿಸುತ್ತಿದ್ದೆವು ಮತ್ತು ಗುಪ್ತ ಹೆಸರೊಂದನ್ನು ನೀಡುತ್ತಿದ್ದೆವು ಎಂದು ಕಳೆದ ಮೇ ತಿಂಗಳಲ್ಲಿ ಬಂಧಿತನಾಗಿರುವ ಮಾಜಿ ಎಚ್‌ಜೆಎಸ್ ಕಾರ್ಯಕರ್ತ ಮತ್ತು ಗುಪ್ತ ಹಿಂದುತ್ವ ಗುಂಪಿಗೆ ಯುವಕರನ್ನು ಸೇರಿಸುವ ಹೊಣೆ ಹೊತ್ತಿದ್ದ ಸುಜಿತ್ ಕುಮಾರ್ ಸಿಟ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News