ಆಮರಣಾಂತ ನಿರಶನಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಟೇಲ್

Update: 2018-09-12 13:05 GMT

ಗಾಂಧಿನಗರ,ಸೆ.12: ಪಾಟಿದಾರ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಅವರು ಬುಧವಾರ ಪಾಟಿದಾರ್ ಸಮುದಾಯದ ಅತ್ಯುನ್ನತ ಸಾಮಾಜಿಕ ಧಾರ್ಮಿಕ ಸಂಸ್ಥೆಗಳಾದ ಖೋಡಲಧಾಮ್ ಮತ್ತು ಉಮಿಯಾಧಾಮ್‌ಗಳ ನಾಯಕರ ನೇತೃತ್ವದಲ್ಲಿ ತನ್ನ ಆಮರಣಾಂತ ನಿರಶನವನ್ನು ಅಂತ್ಯಗೊಳಿಸಿದರು. ಅವರು ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ಮತ್ತು ರೈತರ ಸಾಲ ಮನ್ನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ 19 ದಿನಗಳಿಂದಲೂ ನಿರಶನ ನಡೆಸುತ್ತಿದ್ದರು.

ತನ್ನ ನಿರಶನವನ್ನು ಮುಂದುವರಿಸಲು ಹಾರ್ದಿಕ್ ನಿರ್ಧರಿಸಿದ್ದರು. ಆದರೆ ನಿರಶನವನ್ನು ಕೈಬಿಡುವಂತೆ ಮತ್ತು ಈ ಸರಕಾರದ ವಿರುದ್ಧ ಹೋರಾಟವನ್ನು ಮುಂದುವರಿಸುವಂತೆ ನಾವು ಅವರನ್ನು ಕೋರಿಕೊಂಡಿದ್ದೇವೆ. ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹಾರ್ದಿಕ್ ಆಪ್ತ ಮನೋಜ್ ಪನಾರಾ ಅವರು ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಹಾರ್ದಿಕ್ ಆ.25ರಂದು ಮೀಸಲಾತಿ ಮತ್ತು ಸಾಲಮನ್ನಾ ಬೇಡಿಕೆಗಳೊಂದಿಗೆ ಅಹ್ಮದಾಬಾದ್‌ನ ತನ್ನ ನಿವಾಸದಲ್ಲಿ ಆಮರಣಾಂತ ನಿರಶನವನ್ನು ಆರಂಭಿಸಿದ್ದರು. ನಂತರ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಸಂಚಾಲಕ ಅಲ್ಪೇಶ ಕಥಿರಿಯಾ ಅವರ ಬಿಡುಗಡೆಯ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಗುಜರಾತ್ ಸರಕಾರವು ತನ್ನ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥಿರಿಯಾ ಆ.19ರಿಂದಲೂ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News