ಮಡಿಕೇರಿ: ಪರಿಹಾರ ಕೇಂದ್ರದಲ್ಲಿದ್ದ ಮಕ್ಕಂದೂರಿನ ರಂಜಿತಾಗೆ ಮದುವೆ ಭಾಗ್ಯ

Update: 2018-09-12 14:02 GMT

ಮಡಿಕೇರಿ, ಸೆ.12: ಮಹಾಮಳೆಯಿಂದ ಹಾನಿಗೀಡಾದ ಮಕ್ಕಂದೂರು ಗ್ರಾಮದ ರಂಜಿತಾ ಹಾಗೂ ಕೇರಳದ ಕಣ್ಣೂರಿನ ರಂಜಿತ್ ವಿವಾಹ ಸಮಾರಂಭ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಿತು. 

ಪ್ರಕೃತಿ ವಿಕೋಪಕ್ಕೆ ಗ್ರಾಮ ಬಲಿಯಾದ ಕಾರಣ ನಿಗದಿಯಾಗಿದ್ದ ಮದುವೆ ನಡೆಯುತ್ತದೋ ಇಲ್ಲವೋ ಎನ್ನುವ ಆತಂಕ ಕುಟುಂಬದವರಿಗೆ ಮೂಡಿತ್ತು. 
ರಂಜಿತಾ ಕುಟುಂಬ ಭೂ ಕುಸಿತದಿಂದ ಮನೆ ಕಳೆದುಕೊಂಡಿತ್ತು. ನಂತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಆದರೆ ನೊಂದ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬರುವುದರೊಂದಿಗೆ ವಿವಾಹ ರಂಜಿತಾಳ ವಿವಾಹ ಭಾಗ್ಯ ಗಟ್ಟಿಯಾಯಿತು. ಇಂದು ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ವಿವಾಹ ಸಮಾರಂಭ ನಡೆಯಿತು. ಬೆಳಗ್ಗೆ 10:30 ಗಂಟೆಗೆ ನಗರದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ರಂಜಿತಾ ಹಾಗೂ ರಂಜಿತ್ ಹೊಸ ಜೀವನಕ್ಕೆ ಕಾಲಿಟ್ಟರು.

ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಈ ಮದುವೆಯೊಂದಿಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಮೂರು ಕುಟುಂಬಗಳಲ್ಲಿ ನಿಗದಿಯಾಗಿದ್ದ ವಿವಾಹಗಳು ನಿರ್ವಿಘ್ನವಾಗಿ ನಡೆದಂತಾಗಿದೆ.

ಈ ಹಿಂದೆ ಪರಿಹಾರ ಕೇಂದ್ರದಲ್ಲಿದ್ದ ನೊಂದ ಕುಟುಂಬದ ಹೆಣ್ಣು ಮಕ್ಕಳಾದ ಮಂಜುಳಾ ಹಾಗೂ ವಾರಿಜಾ ಅವರ ವಿವಾಹ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News