ದಲಿತರ ವಿರುದ್ಧದ ಅಪರಾಧಗಳಲ್ಲಿಯೂ ಅವಸರದ ಬಂಧನಗಳನ್ನು ಮಾಡುವಂತಿಲ್ಲ: ಹೈಕೋರ್ಟ್

Update: 2018-09-12 14:05 GMT

  ಲಕ್ನೋ,ಸೆ.12: ಸರ್ವೋಚ್ಚ ನ್ಯಾಯಾಲಯವು ತನ್ನ 2014ರ ಆದೇಶದಲ್ಲಿ ಹೇಳಿರುವಂತೆ ಸಿಆರ್‌ಪಿಸಿಯ ನಿಯಮಗಳನ್ನು ಅನುಸರಿಸದೆ ದಲಿತ ಮಹಿಳೆ ಮತ್ತು ಆಕೆಯ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿರುವ ನಾಲ್ವರು ವ್ಯಕ್ತಿಗಳನ್ನು ಬಂಧಿಸುವಂತಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಪೊಲೀಸರಿಗೆ ತಾಕೀತು ಮಾಡಿದೆ.

ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಐಪಿಸಿಯ ಕಲಮ್‌ಗಳಡಿ ಪ್ರಕರಣ ದಾಖಲಾಗಿದ್ದರೂ ತಕ್ಷಣವೇ,ಮಾಮೂಲು ರೀತಿಯಲ್ಲಿ ಬಂಧನಗಳನ್ನು ನಡೆಸದಂತೆ ನ್ಯಾಯಾಲಯವು ಪೊಲೀಸರನ್ನು ತಡೆದಿದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದ ನ್ಯಾಯಮೂರ್ತಿಗಳಾದ ಅಜಯ ಲಾಂಬಾ ಮತ್ತು ಸಂಜಯ ಹರಕಾವ್ಲಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಅರ್ನೇಶ ಕುಮಾರ್ ಪ್ರಕರಣದಲ್ಲಿ ಆರೋಪಿಯ ಬಂಧನ ಕುರಿತು ಮಾರ್ಗಸೂಚಿಯನ್ನು ಹೊರಡಿಸಿತ್ತು.

ಸಿಆರ್‌ಪಿಸಿಯ ಕಲಂ 41 ಮತ್ತು 41ಎ ಅಡಿ,ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಆರೋಪವನ್ನು ಹೊತ್ತಿರುವ ವ್ಯಕ್ತಿಯನ್ನು ಆತನ ಬಂಧನ ಅಗತ್ಯ ಎನ್ನುವುದನ್ನು ಪೊಲೀಸ್ ದಾಖಲೆಗಳು ಸಕಾರಣವಾಗಿ ವಿವರಿಸುವವರೆಗೂ ಆತನನ್ನು ಬಂಧಿಸುವಂತಿಲ್ಲ.

ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದಂತೆ ಇತ್ತಿಚಿಗೆ ಸಂಸತ್ತು ಮಸೂದೆಯನ್ನು ಅಂಗೀಕರಿಸಿದ ಬೆನ್ನಲ್ಲೇ ಉಚ್ಚ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ. ವಿಶೇಷವಾಗಿ ಪ್ರಾಥಮಿಕ ತನಿಖೆಯಿಲ್ಲದೆ ಬಂಧನಗಳಿಗೆ ಸಂಬಂಧಿಸಿದಂತೆ ಎಸ್‌ಸಿ/ಎಸ್‌ಟಿ ಕಾಯ್ದೆಯ ದುರ್ಬಳಕೆಯನ್ನು ತಡೆಯಲು ಅದನ್ನು ದುರ್ಬಲಗೊಳಿಸಿ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ನಿರರ್ಥಕಗೊಳಿಸಲು ಈ ಮಸೂದೆಯನ್ನು ತರಲಾಗಿತ್ತು.

ದಲಿತ ಮಹಿಳೆ ಮತ್ತು ಆಕೆಯ ಪುತ್ರಿಯನ್ನು ನಿಂದಿಸಿ ಹಲ್ಲೆ ನಡೆಸಿದ ಆರೋಪಿಗಳಾಗಿರುವ ಗೊಂಡಾ ನಿವಾಸಿ ರಾಜೇಶ ಕುಮಾರ ಮತ್ತು ಆತನ ಕುಟುಂಬದ ಮೂವರು ಸದಸ್ಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಂಗಳವಾರ ಉಚ್ಚ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News