ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ ಹೆಚ್ಚಿಸಿದ್ದು ಸ್ವಾಮಿ ವಿವೇಕಾನಂದ: ಬಸವರಾಜ ಹೊರಟ್ಟಿ

Update: 2018-09-12 14:25 GMT

ಧಾರವಾಡ, ಸೆ.12: ಭಾರತದ ಹಿರಿಮೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಮಹಾನ್ ಪುರುಷರಲ್ಲಿ ಸ್ವಾಮಿ ವಿವೇಕಾನಂದ ಅವರದ್ದು ಉನ್ನತ ಸ್ಥಾನ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಕಲಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೆ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಭಾವಚಿತ್ರ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು. ಅವರ ಆದರ್ಶವನ್ನು ಪ್ರತಿ ಮಕ್ಕಳಲ್ಲಿ ಮೂಡುವಂತೆ ಜಾಗೃತಿ ವಹಿಸಬೇಕು. ಸ್ವಾಮಿ ವಿವೇಕಾನಂದರಿಂದ ಜೀವನದಲ್ಲಿ ಸಂಸ್ಕೃತಿ, ನೆಮ್ಮದಿ, ಆತ್ಮವಿಶ್ವಾಸ ಮತ್ತು ಛಲ ಮೂಡುತ್ತದೆ ಎಂದು ಸಭಾಪತಿ ತಿಳಿಸಿದರು.  ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಹೆಚ್ಚು ಆಸಕ್ತಿ, ಕಾಳಜಿ ವಹಿಸಬೇಕು. ಶಿಸ್ತಿನ ಜೀವನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ರೂಪಿಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಕುರಿತು ಸಾಂದರ್ಭಿಕ ಉದಾಹರಣೆಗಳೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ಲೇಖಕ ಡಾ.ಹರ್ಷವರ್ಧನ ಶೀಲವಂತ ವಿಶೇಷ ಉಪನ್ಯಾಸ ನೀಡಿದರು. ಕುಮಾರಿ ಶಿವಾನಿ ಪಾಟೀಲ ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಭಾಗವಹಿಸಿ ವಿವೇಕಾನಂದರ ವಿವೇಕವಾಣಿ ಚಿಕಾಗೋ ಭಾಷಣವನ್ನು ಪ್ರಸ್ತುತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಪಾಠ ಪ್ರತಿಯೊಬ್ಬರಿಗೆ ಸೇವೆ ಮತ್ತು ತ್ಯಾಗವನ್ನು ತಿಳಿಸುತ್ತದೆ. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಇಂದಿನ ಯುವ ಜನಾಂಗಕ್ಕೆ ಪ್ರಸ್ತುತವಾಗಿದೆ ಎಂದರು.

ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹೀಮ್ ಮೈಗೂರ ಸ್ವಾಗತಿಸಿದರು. ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ವೇದಿಕೆಯಲ್ಲಿದ್ದರು. ರವಿಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ.ರಂಗಣ್ಣವರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News