ಪ್ರಿಮಿಯಂ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ

Update: 2018-09-14 14:51 GMT

ಹೊಸದಿಲ್ಲಿ, ಸೆ. 14: ಪ್ರಿಮಿಯಂ ರೈಲುಗಳ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದೇಶದಲ್ಲಿ ಓಡಾಟ ನಡೆಸುವ ಪ್ರಿಮಿಯಂ ರೈಲುಗಳ ಪೈಕಿ 40 ರೈಲುಗಳ ಫ್ಲೆಕ್ಸಿ ಫೇರ್ (ಡೈನಾಮಿಕ್ ಪ್ರೈಸಿಂಗ್) ರದ್ದುಪಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಫ್ಲೆಕ್ಸಿ ಫೇರ್ ವ್ಯವಸ್ಥೆಯಲ್ಲಿ ಈ ರೈಲುಗಳ ಟಿಕೆಟ್ ದರ ವಿಮಾನದ ಟಿಕೆಟ್‌ಗಿಂತಲೂ ದುಬಾರಿಯಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿತ್ತು.

ಎಲ್ಲ ರೈಲುಗಳಿಗೂ ಹೊಸ ವ್ಯವಸ್ಥೆ ಜಾರಿಗೆ ತರುತ್ತಿಲ್ಲ. ಈ ಯೋಜನೆಯಡಿ ಉಳಿದ 102 ರೈಲುಗಳಿಗೆ ಕೊನೆಕ್ಷಣದಲ್ಲಿ ಅಂದರೆ ಪ್ರಯಾಣಕ್ಕೆ ನಾಲ್ಕು ದಿನ ಮುಂಚಿತವಾಗಿ ಲಭ್ಯವಿರುವ ಸೀಟುಗಳನ್ನು ಕಾಯ್ದಿರಿಸುವವರಿಗೆ ಶೇಕಡ 50ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಶೇಕಡ 60ಕ್ಕಿಂತ ಕಡಿಮೆ ಮುಂಗಡ ಕಾಯ್ದಿರಿಸುವಿಕೆ ಇರುವ ರೈಲುಗಳಿಗೂ ಈ ರಿಯಾಯ್ತಿ ನೀಡಲಾಗುವುದು ಎಂದು ರೈಲ್ವೆ ಪ್ರಕಟಿಸಿದೆ.

ಈ ಯೋಜನೆಯಡಿ ಶೇಕಡ 20ರಷ್ಟು ರಿಯಾಯ್ತಿ ಸಿಗುತ್ತಿದೆ. 44 ರಾಜಧಾನಿ, 46 ಶತಾಬ್ದಿ ಮತ್ತು 52 ತುರಂತೊ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಿಗೆ 2016ರ ಸೆಪ್ಟೆಂಬರ್ 9ರಂದು ಈ ಯೋಜನೆ ಜಾರಿಗೆ ಬಂದಿತ್ತು. ಶತಾಬ್ದಿ ಹಾಗೂ ರಾಜಧಾನಿ ಹವಾನಿಯಂತ್ರಿತ ರೈಲುಗಳಾಗಿದ್ದು, ತುರಂತೊ ಎಕ್ಸ್‌ಪ್ರೆಸ್ ರೈಲಿನಲ್ಲಿ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲದ ಬೋಗಿಗಳಿವೆ.

ಶೇಕಡ 50ರಷ್ಟು ಬಳಕೆಯಾಗುವ ರೈಲುಗಳಿಗೆ ಮೊದಲ ಹಂತದಲ್ಲಿ ಫ್ಲೆಕ್ಸಿ ಫೇರ್ ಯೋಜನೆ ರದ್ದುಪಡಿಸಲಾಗಿದೆ. ಪ್ರಯಾಣಿಕರ ಅನುಕೂಲ ಮತ್ತು ಸ್ಪರ್ಧಾತ್ಮಕ ದರವನ್ನು ಒದಗಿಸಿ, ರೈಲ್ವೆ ಆದಾಯ ಹೆಚ್ಚಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಹೊಸ ಯೋಜನೆ ಉನ್ನತಾಧಿಕಾರಿಗಳಿಂದ ಅನುಮತಿ ಪಡೆಯುವ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News