ಭೀಮ್ ಆರ್ಮಿ ಮುಖ್ಯಸ್ಥನ ಬಿಡುಗಡೆಗೆ ಆದಿತ್ಯನಾಥ್ ಸರ್ಕಾರ ನಿರ್ಧಾರ

Update: 2018-09-14 04:35 GMT

ಲಕ್ನೋ, ಸೆ. 14: ಭೀಮ್ ಆರ್ಮಿ ಸಂಘಟನೆಯ ಸಂಸ್ಥಾಪಕ ಚಂದ್ರಶೇಖರ್ ಅಲಿಯಾಸ್ ರಾವಣ ನನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಆದಿತ್ಯನಾಥ್ ಸರ್ಕಾರ ಗುರುವಾರ ಪ್ರಕಟಿಸಿದೆ.

ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಸಹರಣಪುರ ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ  ಪ್ರಕರಣ ದಾಖಲಿಸಿ ಒಂದು ವರ್ಷದಿಂದ ಜೈಲಿನಲ್ಲಿಡಲಾಗಿತ್ತು.

2017ರ ಜೂನ್‌ನಲ್ಲಿ ಚಂದ್ರಶೇಖರ್ ನನ್ನು ಬಂಧಿಸಿ ಎನ್‌ಎಸ್‌ಎ ಉಲ್ಲಂಘನೆ ಆರೋಪ ಹೊರಿಸಲಾಗಿತ್ತು.  ಎನ್‌ಎಸ್‌ಎ ಬಂಧನದ ಅವಧಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ. ತನ್ನನ್ನು ಬಂಧಿಸಿದ ಕ್ರಮದ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಎರಡು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬರುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಸರ್ಕಾರ ಚಂದ್ರಶೇಖರ್ ನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂಬ ವರದಿಗಳನ್ನು ಸರ್ಕಾರ ಅಲ್ಲಗಳೆದಿದೆ.

ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಲಿತರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಇದು ಎಂಬ ಆರೋಪವನ್ನೂ ಸರ್ಕಾರ ಅಲ್ಲಗಳೆದಿದೆ. "ಚಂದ್ರಶೇಖರ್ ತಾಯಿ ಮನವಿ ಸಲ್ಲಿಸಿದ್ದರು. ಪ್ರಸ್ತುತ ಸನ್ನಿವೇಶವನ್ನು ಗಮನಿಸಿ, ಸರ್ಕಾರ ಕರುಣೆ ತೋರಿ, ತಕ್ಷಣವೇ ಚಂದ್ರಶೇಖರ್ ನನ್ನು ಬಿಡುಗಡೆ ಮಾಡಲು ಸಹರಣಪುರ ಅಧಿಕಾರಿಗಳಿಗೆ ಆದೇಶಿಸಲಾಗುತ್ತಿದೆ" ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಚಂದ್ರಶೇಖರ್ ನನ್ನು ಬೇಷರತ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಗೃಹ ಇಲಾಖೆ ದೃಢಪಡಿಸಿದೆ. ಜಿಲ್ಲಾಡಳಿತ ಚಂದ್ರಶೇಖರ್ಗೆ ವಿರುದ್ಧವಾಗಿ ಎರಡು ವಾರದ ಹಿಂದೆ ಸರ್ಕಾರಕ್ಕೆ ವರದಿ ನೀಡಿದ್ದರೂ, ಸರ್ಕಾರ ಚಂದ್ರಶೇಖರ್ ಬಿಡುಗಡೆಗೆ ನಿರ್ಧರಿಸಿದೆ. ಚಂದ್ರಶೇಖರ್ ಸಹಚರರಾದ ಸೋನು ಮತ್ತು ಶಿವಕುಮಾರ್ ಎಂಬವರ ಬಂಧನ ಅವಧಿ ಅಕ್ಟೋಬರ್ 14ರಂದು ಮುಗಿಯಲಿದ್ದು, ಅವರನ್ನೂ ಅವಧಿಗೆ ಮುನ್ನವೇ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News