ಸಚಿವ ರಮೇಶ್ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್ : ಡಿಕೆಶಿ

Update: 2018-09-14 13:02 GMT

ಬೆಂಗಳೂರು, ಸೆ. 14: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಯವರು ನನ್ನ ಸ್ನೇಹಿತರು. ಅವರ ಮನೆಗೆ ಹೋಗಿ ಮಾತನಾಡುತ್ತೇನೆ, ಅವರ ಸಂಕಷ್ಟದ ವೇಳೆ ನಾನು ಬಂಡೆ ರೀತಿ ನಿಂತಿದ್ದೆ. ನಾನು ಈಗಲೂ ಜಾರಕಿಹೊಳಿ ಜತೆ ಇದ್ದೀನಿ. ಭಕ್ತನಿಗೂ-ಭಗವಂತನಿಗೂ ಯಾವ ರೀತಿ ಸಂಬಂಧ ಇದೆ ಎಂಬುದು ಅವರಿಬ್ಬರಿಗೆ ಗೊತ್ತಿರುತ್ತೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನನ್ನನ್ನು ಭೇಟಿಯಾಗಿದ್ದು, 2019ರ ಲೋಕಸಭಾ ಚುನಾವಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು, ಜಿಲ್ಲಾ ಪ್ರವಾಸ ಆಯೋಜಿಸಬೇಕೆಂಬ ಬಗ್ಗೆ ಚರ್ಚೆ ಮಾಡುವುದಕ್ಕೆ ಮಾತ್ರ. ಅದನ್ನು ಹೊರತು ಪಡಿಸಿ ನಾವು ಮಾತನಾಡಿದ್ದನ್ನೆಲ್ಲಾ ಹೇಳುವುದಕ್ಕಾಗುತ್ತಾ ಎಂದ ಅವರು, ರಾಜಕೀಯದಲ್ಲಿ ಏನೇನೋ ನಡೆಯುತ್ತಿರುತ್ತೆ. ಇಲ್ಲಿಯವರೆಗೂ ನಮ್ಮ ಪಕ್ಷದ ಎಷ್ಟು ಜನರಿಗೆ ಏನೇನು ಆಫರ್ ಕೊಟ್ಟಿದ್ದಾರೆಂದು ಬಿಜೆಪಿ ಅವರನ್ನೇ ಹೋಗಿ ಕೇಳಿ ಎಂದರು.

ರಾಜಕೀಯದ ಚೆಸ್ ಆಟದಲ್ಲಿ ಪಾನ್ ಯಾವಾಗ ಮುನ್ನಡೆಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದ ಶಿವಕುಮಾರ್, ಎಷ್ಟು ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ಬಗ್ಗೆ ದೊಡ್ಡವರು ನೋಡಿಕೊಳ್ಳುತ್ತಾರೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಷ್ಟೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News