ದಸರಾ ಆಚರಣೆಗೆ 25 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ: ಸಚಿವ ಜಿ.ಟಿ.ದೇವೇಗೌಡ

Update: 2018-09-14 18:46 GMT

ಮೈಸೂರು,ಸೆ.14: ವಿಶ್ವವಿಖ್ಯಾತ ಮೈಸೂರು ದಸರಾ-2018 ರ ವೆಬ್‍ಸೈಟ್ ಮತ್ತು ಪೋಸ್ಟರ್ ಅನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿಸಚಿವ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಉನ್ನತ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ವಿಶ್ವವಿಖ್ಯಾತ ನಾಡಹಬ್ಬ ದಸರಾ 2018ಕ್ಕೆ ಸಂಬಂಧಿಸಿದಂತೆ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ನಂತರ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಪಾರಂಪರಿಕ ದಸರಾಗೆ ಹೆಚ್ಚು ಹೊತ್ತು ನೀಡಲು ಕಾರ್ಯಕಾರಿ ಸಭೆ ನಡೆಸಲಾಗಿದೆ. ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರನ್ನಾಗಿ ಸಚಿವರಾದ ಪುಟ್ಟರಂಗಶೆಟ್ಟಿ, ಸಾ.ರಾ.ಮಹೇಶ್ ಮತ್ತು ಎನ್.ಮಹೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ದಸರಾ ಆಚರಣೆಗೆ 15 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ದಸರಾಗೆ 25 ಕೋಟಿ.ರೂ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ನಗರ ರಸ್ತೆಗಳ ಅಭಿವೃದ್ದಿ, ಪಾರ್ಕ್‍ಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯೊಳಗೆ ಬರುವ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಿವೆ ಎಂದು ತಿಳಿಸಿದರು.

ಜಂಬೂ ಸವಾರಿ ರಿಹರ್ಸಲ್ ಇಲ್ಲ: ದಸರಾಗೆ ಜಂಬೂ ಸವಾರಿ ರಿಹರ್ಸಲ್ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜಿ.ಟಿ.ದೇವೇಗೌಡ, ಕೇವಲ ಒಂದೇ ದಿನ ದಸರಾ ಮೆರವಣಿಗೆ ನಡೆಯಲಿದ್ದು, ಜಂಬೂ ಸವಾರಿ ರಿಹರ್ಸಲ್ ಇರುವುದಿಲ್ಲ, ಯಾವುದೇ ರಿಹರ್ಸಲ್ ಇರುವುದಿಲ್ಲ, ಜಂಬೂ ಸವಾರಿ ಜೊತೆ ಆಯ್ದ  ಕಲಾವಿದರ ತಂಡ ಮಾತ್ರ ಪಾಲ್ಗೊಳ್ಳಲಿರುವುದರಿಂದ ಬೇರೆ ಕಲಾವಿದರು ಪಾಲ್ಗೊಳ್ಳಲು ಅವಕಾಶವಿಲ್ಲ, ಅದಕ್ಕಾಗಿ ಒಂದು ದಿನ ಗಜಪಡೆಗಳು ಸರಳವಾಗಿ ನಡೆದುಹೋಗುವಾಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಾಗದ ಕಲಾವಿದರು ಪಾಲ್ಗೊಂಡು ಕಲಾಪ್ರದರ್ಶನವನ್ನು ನೀಡಬಹುದು. ಇದಕ್ಕಾಗಿ ಒಂದು ರವಿವಾರ ಅವರಿಗಾಗಿಯೇ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಇದೇ ತಿಂಗಳ 20ರ ಒಳಗಾಗಿ ದಸರಾ ಉಪ ಸಮಿತಿ ನೇಮಕ ಮಾಡಲಾಗುತ್ತಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಿಂದ ತಲಾ 5 ಮಂದಿ ಜನಪ್ರತಿನಿಧಿಗಳು ಉಪ ಸಮಿತಿಯಲ್ಲಿರಲಿದ್ದಾರೆ. ದಸರಾ ರೂಪುರೇಷೆ ಬಗ್ಗೆ ಇದೇ ತಿಂಗಳ 26 ಕ್ಕೆ ಸಂಪೂರ್ಣ ಮಾಹಿತಿ ಕೊಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ ಈ  ಬಾರಿ ದಸರಾ ಗೆ ಬೈಕ್ ರ್ಯಾಲಿ, ಮತ್ಸ್ಯ ಪ್ರದರ್ಶನ, ಏರ್ ಶೋ, ಲಲಿತ ಮಹಲ್, ಟೌನ್ ಹಾಲ್ ನಲ್ಲಿ  ಮೈಸೂರು ಇತಿಹಾಸ ಸಾರುವ ಚಿತ್ರ ಪ್ರದರ್ಶನವಿರಲಿದೆ. ಲಂಡನ್, ಪ್ಯಾರಿಸ್, ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗಳಲ್ಲಿಯೂ ಕೂಡ ದಸರಾ ಪ್ರಚಾರಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಅಸಮಧಾನ ಹೊರಹಾಕಿದ ಸಚಿವ ಪುಟ್ಟರಂಗಶೆಟ್ಟಿ
ಮೈಸೂರು: ದಸರಾ ಕಾರ್ಯಕಾರಿ ಸಮಿತಿ ಸಭೆ ಆರಂಭದಲ್ಲೇ ಸಚಿವ ಪುಟ್ಟರಂಗ ಶೆಟ್ಟಿ ತಮ್ಮ ಅಸಮಧಾನ ಹೊರಹಾಕಿ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಸಚಿವರನ್ನು ಸಭೆಗೆ ಕರೆಯುತ್ತೀರಿ. ಆದರೆ ನಮಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ, ಹಾಗಿದ್ದ ಮೇಲೆ ನಮ್ಮನ್ನು ಏಕೆ ಕರೆಯುತ್ತೀರಿ, ನಾವು ಏಕೆ ಸಭೆಯಲ್ಲಿ ಭಾಗವಹಿಸಬೇಕು, ನಮಗೆ ದಸರಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆಯಿಟ್ಟರು. ಕಾರ್ಯಕಾರಿ ಸಮಿತಿಗೆ ಸೇರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಸೂಚಿಸಿದರು.

ಆದರೂ ಸಮಾಧಾನಗೊಳ್ಳದ ಸಚಿವ ಪುಟ್ಟರಂಗಶೆಟ್ಟಿ ದಸರಾ ಕಾರ್ಯಕಾರಿ ಸಮಿತಿಯಿಂದ ಹೊರನಡೆದು ನನ್ನನ್ನು ಕಡೆಗಣಿಸಲಾಗುತ್ತಿದೆ. ಸಚಿವ ಜಿ.ಟಿ.ದೇವೇಗೌಡರನ್ನು ಬಿಟ್ಟರೆ ನಾನೇ ಸೀನಿಯರ್, ಶಿಷ್ಟಾಚಾರ ಉಲ್ಲಂಘನೆಯಾಗಿದೆ. ನಾನೇಕೆ ಸಭೆಯಲ್ಲಿರಬೇಕು, ಪೋಸ್ಟರ್ ನಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಚಿವೆ ಜಯಮಾಲಾ ಅವರ ಫೋಟೋಗಳು ಮಾತ್ರ ಇವೆ. ನನ್ನ ಫೋಟೋ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಬರಲಿ ಅವರಿಗೆ ಹೇಳುತ್ತೇನೆ ಎಂದು ಹೊರ ನಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಇವತ್ತು ಸಂಜೆವರೆಗೂ ಟೈಂ ಕೊಟ್ಟಿದ್ದೇನೆ. ಸರಿಮಾಡಿಕೊಳ್ಳದಿದ್ದರೆ ನಮಗೆ ತುಂಬಾನೆ ಅವಮಾನವಾಗುತ್ತದೆ. ಕಾಂಗ್ರೆಸ್ ಸಚಿವರನ್ನು ಕಡೆಗಣಿಸಲಾಗುತ್ತಿದೆ. ಈಗ ಆಗಿರೋ ಅವಮಾನದ ಬಗ್ಗೆ ಸಮನ್ವಯ ಸಮಿತಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News