ಸರ್ ಎಂ. ವಿಶ್ವೇಶ್ವರಯ್ಯರಿಗೆ 'ಗೂಗಲ್'ನಿಂದ 'ಡೂಡಲ್' ಗೌರವ

Update: 2018-09-15 08:01 GMT

ಹೊಸದಿಲ್ಲಿ, ಸೆ.15: ಭಾರತ ಕಂಡ ಮಹಾನ್ ಇಂಜಿನಿಯರ್, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವಾದ ಇಂದು ಗೂಗಲ್ ಈ ಅಪ್ರತಿಮ ಸಾಧಕನಿಗೆ ಗೂಗಲ್ ಮೂಲಕ ತನ್ನ ಗೌರವ ಸಮರ್ಪಿಸಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಭಾರತದಲ್ಲಿ ಇಂಜಿನಿಯರ್ ಗಳ ದಿನವೆಂದು ಆಚರಿಸಲಾಗುತ್ತಿದೆ.

ಗೂಗಲ್ ಡೂಡಲ್ ನಲ್ಲಿ ಸರ್ ವಿಶ್ವೇಶ್ವರಯ್ಯ ಅವರ ಬಣ್ಣದ ಚಿತ್ರವಿದ್ದು ಹಿನ್ನೆಲೆಯಲ್ಲಿ ಅಣೆಕಟ್ಟಿನ ಚಿತ್ರವೂ ಇದೆ. ಸರ್ ವಿಶ್ವೇಶ್ವರಯ್ಯ ಅವರು 1924ರಲ್ಲಿ ವಿನ್ಯಾಸಗೊಳಿಸಿದ ಖ್ಯಾತ ಕೃಷ್ಣ ರಾಜಸಾಗರ ಅಣೆಕಟ್ಟನ್ನು ಈ ಚಿತ್ರ ಪ್ರತಿನಿಧಿಸುತ್ತದೆ. ಆ ಕಾಲದಲ್ಲಿ ಅದು ಏಷ್ಯಾದಲ್ಲಿಯೇ ಅತಿ ದೊಡ್ಡ ಅಣೆಕಟ್ಟು ಎಂದು ಪರಿಗಣಿತವಾಗಿತ್ತು.

ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಸೆಪ್ಟೆಂಬರ್ 15, 1861ರಂದು ಜನಿಸಿದ ಸರ್ ಎಂ. ವಿಶ್ವೇಶ್ವರಯ್ಯ ಮದ್ರಾಸ್ ವಿವಿಯಿಂದ ಬಿಎ ಪದವಿ ಪಡೆದ ನಂತರ  ಪುಣೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು.

ಭಾರತೀಯ ನೀರಾವರಿ ಆಯೋಗದಲ್ಲಿ ಸೇವೆ ಸಲ್ಲಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು 1909ರಲ್ಲಿ ಮೈಸೂರು ರಾಜ್ಯದ ದಿವಾನ್ ಆಗಿದ್ದರು. 1915ರಲ್ಲಿ ಅವರಿಗೆ  ಬ್ರಿಟಿಷರು ನೈಟ್ ಒದವಿ ನೀಡಿ ಗೌರವಿಸಿದ್ದರು. ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪ್ರತಿಮ ಸೇವೆಗಾಗಿ 1955ರಲ್ಲಿ ಭಾರತ ಸರಕಾರ ಅವರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News