ಕೇಂದ್ರ ಅಧ್ಯಯನ ತಂಡದ ಭೇಟಿ ವೇಳೆ ಸಂಸದ ಪ್ರತಾಪ್ ಸಿಂಹ ಹೊಣೆಗೇಡಿತನ ಖಂಡನೀಯ: ಎ.ಕೆ. ಸುಬ್ಬಯ್ಯ

Update: 2018-09-15 11:43 GMT

ಪೊನ್ನಂಪೇಟೆ, ಸೆ. 15: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ನಷ್ಟ-ಕಷ್ಟಗಳ ಬಗ್ಗೆ ಅಧ್ಯಯನ ನಡೆಸಲು ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಅಧ್ಯಾಯನ ತಂಡದ ಎದುರು ಸಂಸದರಾದ ಪ್ರತಾಪ್ ಸಿಂಹ ತೋರಿದ ಹೊಣೆಗೇಡಿತನ ತೀರಾ ಖಂಡನೀಯ ಎಂದು ಹಿರಿಯ ಮುಖಂಡ, ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ್ದಾರೆ.

ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ದುರಂತದ ಹಾನಿ-ನಷ್ಟಗಳಿಗೆ ಅಗತ್ಯ ಪರಿಹಾರಧನಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಲು ಕೊಡಗಿಗೆ ಬಂದ ಕೇಂದ್ರ ಅಧ್ಯಯನ ತಂಡ ಮಡಿಕೇರಿ ಸಮೀಪದ ಹೆಬ್ಬಟಗೇರಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಪರಿಶಿಲನೆ ನಡೆಸುತ್ತಿದ್ದ ಸ್ಥಳದಲ್ಲಿ ಹಾಜರಿದ್ದ ಸಂಸದ ಪ್ರತಾಪ ಸಿಂಹ ಮೂಲ ಪ್ರಶ್ನೆಯನ್ನೇ ಬಿಟ್ಟು ಭೂಪರಿವರ್ತನೆ, ರೆಸಾರ್ಟ್ ನಿರ್ಮಾಣ ಇತ್ಯಾದಿ ಅನಾವಶ್ಯಕ ಮತ್ತು ಸಂಬಂಧವೇ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಅಧ್ಯಯನ ತಂಡದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದಾರೆ. ಸಂಸದರು ಕೆಲ ಪರಿಸರವಾದಿಗಳ ರೆಡಿಮೇಡ್ ಹೇಳಿಕೆಯನ್ನು ನಕಲಿಸಿ ವಾಸ್ತವವನ್ನು ಮರೆಮಾಚುವ ಪ್ರಯತ್ನ ಮಡಿದ್ದಾರೆ. ಇದು ಪ್ರತಾಪ ಸಿಂಹ ಅವರು ಸಂಸದರಾಗಿ ಮಾಡುವ ಕೆಲಸವಲ್ಲ. ಬದಲಾಗಿ ಅವರು ಮಾಡಿದ್ದು ಹೊಣೆಗೇಡಿತನ ಎಂದು ಕಿಡಿಕಾರಿದ್ದಾರಲ್ಲದೆ, ಸಂಸದರ ಈ ನಡಾವಳಿಕೆಯಿಂದಾಗಿ ಕೇಂದ್ರದಿಂದ ಕೊಡಗಿಗೆ ಪರಿಹಾರ ಧನ ಬರುವುದಕ್ಕೆ ತಡೆ ಉಂಟಾಗುವ ಸಂಭವವಿದೆ ಎಂದು ಎ.ಕೆ. ಸುಬ್ಬಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಒಬ್ಬ ಸಂಸದನಾಗಿ ಕೊಡಗಿನಲ್ಲಿ ಸಂಭವಿಸಿರುವ ನಷ್ಟ-ಕಷ್ಟಗಳ ಕಡೆಗೆ ಕೇಂದ್ರ ತಂಡದ ಗಮನ ಹರಿಯುವಂತೆ ಮಾಡಿ ಜಿಲ್ಲೆಗೆ ಆದಷ್ಟು ಪರಿಹಾರ ಧನ ಬರುವಂತೆ ನೋಡಿಕೊಳ್ಳುವುದನ್ನು ಬಿಟ್ಟು, ತಂಡದ ಗಮನವನ್ನು ಬೇರೆಡೆಗೆ ಸೆಳೆದು ಕೊಡಗಿಗೆ ಅನ್ಯಾಯವೆಸಗಿರುವುದನ್ನು ಜನದ್ರೋಹಿ ಕೃತ್ಯ ಎಂದು ಹೇಳದೆ ವಿಧಿಯಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಎ.ಕೆ. ಸುಬ್ಬಯ್ಯ ಅವರು, ಸಂಸದರ ಅಂದಿನ ನಡೆಯನ್ನು ಸ್ಥಳಿಯ ಮುಖಂಡರೊಬ್ಬರು ಸ್ಥಳದಲ್ಲೇ ಬಹಿರಂಗವಾಗಿ ಖಂಡಿಸಿರುವುದು ಮಾತ್ರ ಒಂದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News