ಬಂಧಿತ ಕಾಶ್ಮೀರಿ ವ್ಯಕ್ತಿಗೆ ಹೈಕೋರ್ಟ್ ನೀಡಿದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ

Update: 2018-09-15 10:55 GMT

ಹೊಸದಿಲ್ಲಿ, ಸೆ.15: ಉಗ್ರರಿಗೆ ಹಣ ಪೂರೈಕೆ ಪ್ರಕರಣ ಕುರಿತಂತೆ ರಾಷ್ಟ್ರೀಯ ತನಿಖಾ ಏಜನ್ಸಿಯಿಂದ ಬಂಧಿಸಲ್ಪಟ್ಟಿದ್ದ ಕಾಶ್ಮೀರಿ ಉದ್ಯಮಿ ಝಹೂರ್ ಅಹ್ಮದ್ ಶಾ ವತಾಲಿಗೆ ದಿಲ್ಲಿ ಹೈಕೋರ್ಟ್ ಗುರುವಾರ ಜಾಮೀನು ನೀಡಿದ್ದರೆ ಶುಕ್ರವಾರ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ಹೇರಿದೆ. ರಾಷ್ಟ್ರೀಯ ತನಿಖಾ ಏಜನ್ಸಿಯ ಅಪೀಲಿನ ಹಿನ್ನೆಲೆಯಲ್ಲಿ ಈ ತಡೆಯಾಜ್ಞೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ನೀಡಿದೆ.

ಇದು ಎಲ್‍ಇಟಿ ಮುಖ್ಯಸ್ಥ ಹಫೀಝ್ ಮುಹಮ್ಮದ್ ಸಯೀದ್ ಶಾಮೀಲಾಗಿರುವ ಗಂಭೀರ ಪ್ರಕರಣವಾಗಿರುವುದರಿಂದ ಉನ್ನತ  ನ್ಯಾಯಾಲಯ ಮಧ್ಯ ಪ್ರವೇಶಿಸಿ ವತಾಲಿ ಬಿಡುಗಡೆಯನ್ನು ತಡೆಹಿಡಿಯಬೇಕು, ಇಲ್ಲದೇ ಹೋದಲ್ಲಿ ಎನ್‍ಐಎ ತನಿಖೆಗೆ ಹಿನ್ನಡೆಯಾಗುವುದು ಎಂದು  ಎನ್‍ಐಎ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದರು. ವತಾಲಿಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಂಧಿಸಲಾಗಿತ್ತು.

ವಿವಿಧ ಹುರಿಯತ್ ನಾಯಕರುಗಳಿಗೆ ವಿತರಣೆಗೆಂದು ಆತ ಪಡೆದ ಹಣದ ವಿವರಗಳನ್ನು ಆತನ ಲೆಕ್ಕಿಗರು ಬರೆದ ದಾಖಲೆ ವತಾಲಿ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಐಎ ಹೇಳಿತು. ವತಾಲಿ ಸಹಿಯಿರುವ ದಾಖಲೆಗಳಲ್ಲಿ ಎಲ್‍ಇಟಿ ಮುಖ್ಯಸ್ಥ, ಭಾರತದಲ್ಲಿನ ಪಾಕ್ ಹೈಕಮಿಷನ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥರಿಂದ ಪಡೆದ ಹಣದ ದಾಖಲೆಗಳಿವೆ ಎಂದು ಎನ್‍ಐಎ ಆರೋಪಿಸಿದೆ.

ಆದರೆ ಹೈಕೋರ್ಟ್ ಆದೇಶ ತಪ್ಪು ಎನ್ನುವುದಕ್ಕೆ ಏನಾದರೂ ನಂಬಲರ್ಹ ದಾಖಲೆ ಪ್ರಸ್ತುತಪಡಿಸಬೇಕೆಂದು ವತಾಲಿ ವಕೀಲರು ತಮ್ಮ ವಾದದಲ್ಲಿ  ಹೇಳಿದರು. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News