ಸುಂಟಿಕೊಪ್ಪ: ಉರುಳಿಗೆ ಸಿಲುಕಿ ಪ್ರಾಣಬಿಟ್ಟ ಚಿರತೆ

Update: 2018-09-15 11:47 GMT

ಸುಂಟಿಕೊಪ್ಪ,ಸೆ.15: ಮತ್ತಿಕಾಡುವಿನ ತೋಟವೊಂದರಲ್ಲಿ ಪ್ರಾಣಿಗಳ ಬೇಟೆಗಾಗಿ ಅಳವಡಿಸಿಲಾಗಿದ್ದ ಬೇಲಿಯ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣತೆತ್ತಿರುವ ಘಟನೆ ವರದಿಯಾಗಿದೆ. 

ತೋಟಕ್ಕೆ ಬೇಟೆ ಅರಸಿ ಬಂದಿದ್ದ ಅಂದಾಜು 7 ರಿಂದ 8 ವರ್ಷ ಪ್ರಾಯದ ಗಂಡು ಚಿರತೆ ಯಾರೋ ಅಳವಡಿಸಿದ ಉರುಳಿಗೆ ಸಿಲುಕಿ  ಪ್ರಾಣಬಿಟ್ಟಿದೆ. ಮತ್ತಿಕಾಡುವಿನ ಕೃಷ್ಣ ತೋಟ (ಬೀಬಿ ಪ್ಲಾಂಟೇಶನ್) ಎಂಬವರ ತೋಟದಲ್ಲಿ ಈ ಘಟನೆಯು ಸಂಭವಿಸಿದ್ದು, ತೋಟದ ಕಾರ್ಮಿಕ ಅಳಂಬೆ ಅರಸಿಕೊಂಡು ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಮಿಕ ಚಿನ್ನಪ್ಪ ತೋಟದ ಮಾಲಕರಿಗೆ ವಿಚಾರವನ್ನು ತಿಳಿಸಿದ್ದಾರೆ.

ನಂತರ ಮಾಲಕರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ್ದ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಯಾರೋ ರಾತ್ರಿಯ ವೇಳೆ ತೋಟದ ಬೇಲಿಗೆ ಉರುಳನ್ನು ಅಳವಡಿಸಿದ್ದು, ಆಹಾರ ಅರಸಿ ಬೇಟೆಗೆ ಬಂದ ಚಿರತೆಯ ಕುತ್ತಿಗೆ ಉರುಳು ಸಿಲುಕಿ ಪ್ರಾಣ ಕಳೆದುಕೊಂಡಿದೆ ಎಂದು ತೋಟದ ಮಾಲಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. 

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News