ಕಾಂಗ್ರೆಸ್ ಇಂದಿಗೂ ನನಗೆ ತಾಯಿ ಇದ್ದಂತೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್

Update: 2018-09-15 11:53 GMT

ಮಡಿಕೇರಿ, ಸೆ.15: ಕೆಲವರಿಗೆ ಹೆಣ್ಣು, ಹೊನ್ನು, ಮಣ್ಣು ಸೇರಿದಂತೆ ಇನ್ನಿತರ ವ್ಯಸನಗಳಿರುವಂತೆ ರಾಜ್ಯ ಬಿಜೆಪಿ ಪತನ ವ್ಯಸನದಲ್ಲಿ ಮುಳುಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿಯ ಸಂಕೇತವಾಗಿರುವ ಕಮಲ ಇಂದು ಬಿಜೆಪಿಯವರಿಂದ ಮಲಿನವಾಗಿದೆ ಎಂದು ಟೀಕಿಸಿದರು.

ಅಭಿವೃದ್ಧಿ ಪರ ಚಿಂತನೆಯಿಲ್ಲದ ಬಿಜೆಪಿ ಕೇವಲ ರಾಜಕಾರಣ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದೆ. ರಾಜ್ಯ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿರುವ ಬಿಜೆಪಿ ಪತನ ವ್ಯಸನದಲ್ಲಿ ಮುಳುಗಿರುವುದರಿಂದ ಇಷ್ಟೆಲ್ಲಾ ಗೊಂದಲಗಳು ಸೃಷ್ಟಿಯಾಗುತ್ತಿದೆ ಎಂದು ವಿಶ್ವನಾಥ್ ಹೇಳಿದರು. 

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಐದು ವರ್ಷಗಳನ್ನು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಎದುರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಸರಕಾರಕ್ಕೂ ಸಮನ್ವಯ ಸಮಿತಿಗೂ ಯಾವುದೇ ಸಂಬಂಧವಿಲ್ಲ, ನಾವೆಲ್ಲರೂ ಸಮನ್ವಯತೆಯನ್ನು ಕಾಯ್ದುಕೊಂಡೆ ಬರುತ್ತಿದ್ದೇವೆ. ಕಾಂಗ್ರೆಸ್ ಇಂದಿಗೂ ನನಗೆ ತಾಯಿ ಇದ್ದಂತೆ, ನಾಯಕರಿಂದ ಕಾಂಗ್ರೆಸ್ ಹಾಳಾಗಿದೆಯೇ ಹೊರತು ಕಾಂಗ್ರೆಸ್ ಹಾಳಾಗಿಲ್ಲವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಕೇಂದ್ರ ಜಾರಿಗೆ ತಂದಿರುವ ಜಿಎಸ್‍ಟಿ ಪದ್ಧತಿಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ. ಒಳ್ಳೆಯದನ್ನು ಸ್ವೀಕರಿಸುವುದಕ್ಕಾಗಿ ಕೆಟ್ಟದನ್ನು ಮರೆಮಾಚಬೇಕಾಗಿದೆ ಎಂದರು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಏಕಕಾಲಕ್ಕೆ ನಡೆಯಬೇಕೆನ್ನುವ ಕೇಂದ್ರ ಸರಕಾರದ ಪರಿಕಲ್ಪನೆ ಸರಿಯಾಗಿದೆ. ಯಾಕೆಂದರೆ ದೇಶದಲ್ಲಿ ವರ್ಷವಿಡೀ ಒಂದಲ್ಲ ಒಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ನಾವು ಇಂದು 37 ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಈ ಆಚರಣೆಗೆ 37 ದಿನ ಮತ್ತು ಪೂರ್ವಸಿದ್ಧತಾ ಸಭೆಗಳಿಗಾಗಿ 37 ದಿನ ಹೀಗೆ 74 ದಿನಗಳನ್ನು ನಾವು ಕಳೆದು ಬಿಡುತ್ತಿದ್ದೇವೆ. ಕೇವಲ ಜಾತಿ ಆಧಾರಿತ ಆಡಳಿತ ಮತ್ತು ರಾಜಕಾರಣ ನಡೆಯುತ್ತಿದ್ದು, ಕ್ಯಾಷ್ ಅಂಡ್ ಕ್ಯಾಸ್ಟ್ ಆಧಾರದ ವ್ಯವಸ್ಥೆಯನ್ನು ಯಾವ ಪುಣ್ಯಾತ್ಮ ರಿಪೇರಿ ಮಾಡುತ್ತಾನೋ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. 

ಪ್ರಧಾನಮಂತ್ರಿಗಳು ಎಲ್ಲರನ್ನೂ ವಿಶ್ವಾಸವನ್ನು ತೆಗೆದುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಸದ್ಯದಲ್ಲಿಯೇ ಜೆಡಿಎಸ್‍ನ ಎಲ್ಲಾ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ವಿಶ್ವನಾಥ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News