ಸಾಮರ್ಥ್ಯವಿದ್ದರೆ ನನ್ನನ್ನೊಮ್ಮೆ ಮುಟ್ಟಿ ನೋಡಲಿ: ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಸವಾಲು

Update: 2018-09-15 12:01 GMT

ಮಡಿಕೇರಿ, ಸೆ.15: ಯಾರದೋ ಕೃಪಾಕಟಾಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಬಂದ ಸಂಸದ ಪ್ರತಾಪಸಿಂಹರವರು, ನನ್ನ ವಿರುದ್ಧದ ಆರೋಪಗಳನ್ನು ಕೈಬಿಟ್ಟಲ್ಲಿ ಪಕ್ಷಕ್ಕೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಸಂಸದರ ಸಾಮಾಜಿಕ ಜಾಲತಾಣದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ತಂಡ ಜಿಲ್ಲೆಯ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ತಪ್ಪು ಮಾಹಿತಿ ನೀಡಿದರೆನ್ನುವ ಕಾರಣದಿಂದ ಎಂ.ಬಿ. ದೇವಯ್ಯ, ಸ್ಥಳದಲ್ಲೆ ಸಂಸದರ ಮೇಲೆ ಹರಿಹಾಯ್ದಿದ್ದರು. ಇದಕ್ಕೆ ಸಂಸದರು ಸಾಮಾಜಿಕ ಜಾಲ ತಾಣದಲ್ಲಿ, ವೃದ್ಧರೆನ್ನುವ ಕಾರಣದಿಂದ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ರೀತಿಯಲ್ಲಿ  ಹೇಳಿಕೆ ನೀಡಿದ್ದರು.

'ನನಗೀಗ ಅರುವತ್ತೆಂಟು ವರ್ಷ. ಸಂಸದ ಪ್ರತಾಪ್ ಸಿಂಹ ಅವರು ನನ್ನ ಮಗನ ಪ್ರಾಯದವರು. ನಾನು ಸಾಕಷ್ಟು ಸಾರ್ವಜನಿಕ ಹೋರಾಟಗಳಲ್ಲಿ ವಿದ್ಯಾರ್ಥಿಯಾಗಿದ್ದ ಅವಧಿಯಿಂದಲೇ ಪಾಲ್ಗೊಂಡು ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ನನ್ನ ಸಾರ್ವಜನಿಕ ಸೇವೆಗೆ ನಾಲ್ಕರಿಂದ ಐದು ದಶಕಗಳು ಸಂದಿದೆ. ಬೇಕಾದರೆ ಸಂಸದ ಪ್ರತಾಪ್ ಸಿಂಹನವರ ಸಾಮಾಜಿಕ ಸೇವೆ ಏನು ಎನ್ನುವುದರ ಬಗ್ಗೆ ಕುಳಿತು ಚರ್ಚಿಸೋಣ ಎಂದು ಖಾರವಾಗಿ ನುಡಿದರು.

ಸಂಸದರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ನಾಲಿಗೆ ಕುಲವನ್ನು ಹೇಳಿತು’ ಎನ್ನುವಂತೆ ಸಂಸದ ಪ್ರತಾಪ್ ಸಿಂಹ ವರ್ತಿಸಿದ್ದಾರೆ. ಅವರಿಗೆ ಸಾಮರ್ಥ್ಯವಿದ್ದರೆ ನನ್ನನ್ನೊಮ್ಮೆ ಮುಟ್ಟಿ ನೋಡಲಿ ಎಂದು ಸವಾಲೆಸೆದ ಎಂ.ಬಿ.ದೇವಯ್ಯ, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಂತ್ವನ ಹೇಳಿ, ಅಭಯವನ್ನು ನೀಡುವುದರೊಂದಿಗೆ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಂಸದರನ್ನು ಅಂದು ನಾನು ಕಟುವಾಗಿ ಪ್ರಶ್ನಿಸಿದ್ದೇನೆಯೇ ಹೊರತು, ಅಸಂವಿಧಾನಿಕವಾದ ಯಾವುದೇ ಪದಪ್ರಯೋಗ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News