ಮೇಲ್ಜಾತಿಯ ಯುವತಿಯನ್ನು ವಿವಾಹವಾಗಿದ್ದ ದಲಿತ ಯುವಕನ ಬರ್ಬರ ಕೊಲೆ

Update: 2018-09-15 12:03 GMT

ಮಿರ್ಯಲಗುಡ (ನಲ್ಗೊಂಡ), ಸೆ. 15:  ಎಂಟು ತಿಂಗಳ ಹಿಂದೆ ವೈಶ್ಯ ಸಮುದಾಯದ ಯುವತಿಯ ಜತೆ ಪ್ರೇಮ ವಿವಾಹವಾಗಿದ್ದ ಪರಿಶಿಷ್ಟ ಜಾತಿಯ 24 ವರ್ಷದ ಯುವಕ ಪೆರಮುಲ್ಲ ಪ್ರಣಯ್ ಎಂಬಾತನನ್ನು ಆಗಂತುಕನೊಬ್ಬ ಬರ್ಬರವಾಗಿ ಹತ್ಯೆಗೈದ ಘಟನೆ ತೆಲಂಗಾನದ ಮಿರ್ಯಲಗುಡ ಎಂಬ ಸಣ್ಣ ಪಟ್ಟಣದಲ್ಲಿ  ಶುಕ್ರವಾರ ನಡೆದಿದೆ.

ತನ್ನ ಗರ್ಭಿಣಿ ಪತ್ನಿ 21 ವರ್ಷದ ಅಮೃತ ವರ್ಷಿಣಿ ಹಾಗೂ ತಾಯಿ ಪ್ರೇಮಲತಾ  ಜತೆ ಆಸ್ಪತ್ರೆಗೆ ಹೋಗಿ ಮರಳಿ ತನ್ನ ಕಾರಿನತ್ತ ಸಾಗುವಾಗ ಕತ್ತಿ ಹಿಡಿದುಕೊಂಡು ಹಿಂದಿನಿಂದ ಬಂದ ವ್ಯಕ್ತಿ  ಹಠಾತ್ ದಾಳಿ ನಡೆಸಿದ್ದಾನೆ. ಅವರ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅಮೃತ ವರ್ಷಿಣಿಯ ಕುಟುಂಬದವರೇ ಈ ಕೊಲೆ ನಡೆಸಿರಬೇಕೆಂದು ಶಂಕಿಸಲಾಗಿದೆ.

ಬೆಳಗ್ಗೆ 11.30ರ ಸುಮಾರಿಗೆ ಈ ಕೊಲೆ ನಡೆದಿದ್ದು ಕೆಲವೇ ಕ್ಷಣಗಳಲ್ಲಿ ಅದರ ಸೀಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆಗಂತುಕನ ದಾಳಿಗೆ ಪ್ರಣಯ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೇಲ್ಜಾತಿಯ ಹುಡುಗಿಯನ್ನು ಮಾಲ ಸಮುದಾಯದ ತಮ್ಮ ಮಗ ವಿವಾಹ ವಾಗಿದ್ದರಿಂದ ಆತನ ಜೀವಕ್ಕೆ ಸದಾ ಅಪಾಯವಿದೆಯೆಂದು  ತಮಗೆ ತಿಳಿದಿತ್ತು ಎಂದು ಪ್ರಣಯ್ ತಾಯಿ ಹೇಳಿದ್ದಾರೆ. ತಾವು ಆಸ್ಪತ್ರೆಯಲ್ಲಿರುವ ವಿಷಯವನ್ನು ಅಮೃತವರ್ಷಿಣಿಯ ತಂದೆ ತಿರುನಗರು ಮಾರುತಿ ರಾವ್ ಗೆ ಯಾರೋ ಮಾಹಿತಿ ನೀಡಿರಬೇಕೆಂದು ಆಕೆ ಸಂಶಯ ವ್ಯಕ್ತಪಡಿಸುತ್ತಾರೆ.

ತನ್ನ ತಂದೆ ತಮ್ಮ ಫೋನಿನಲ್ಲಿ ತನ್ನ ನಂಬರ್ ಬ್ಲಾಕ್ ಮಾಡಿದ್ದಾಗಿ ಹೇಳುವ ಅಮೃತವರ್ಷಿಣಿ ತಾನು ಯಾವತ್ತಾದರೂ ಅವರ ಜತೆ  ಮಾತನಾಡಿದಾಗ  ಅಬಾರ್ಶನ್ ಮಾಡಿಸುವಂತೆ ಒತ್ತಾಯಿಸುತ್ತಿದ್ದರೆಂದು ತಿಳಿಸಿದ್ದಾರೆ.

ಅಮೃತ ಮತ್ತು ಪ್ರಣಯ್ ಬಹಳ ಸಮಯದಿಂದ ಪರಿಚಿತರಾಗದ್ದು ಹೈದರಾಬಾದ್ ನಗರದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುವಾಗ ಅವರ ನಡುವೆ ಪ್ರೇಮಾಂಕುರಗೊಂಡಿತ್ತು. ಹೈದರಾಬಾದ್ ನ ಆರ್ಯ ಸಮಾಜದಲ್ಲಿ ಅವರು ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ಭಯದಿಂದ ಬೇರೆ ಊರಲ್ಲಿ ವಾಸಿಸುತ್ತಿದ್ದ ದಂಪತಿ ನಂತರ ನಲ್ಗೊಂಡ ಪೊಲೀಸರು ಅವರಿಗೆ ರಕ್ಷಣೆಯೊದಗಿಸುವ ಭರವಸೆ ನೀಡಿದ ನಂತರ ಮತ್ತೆ ತಮ್ಮ ಊರಿನಲ್ಲೇ ನೆಲೆಸಿದ್ದರೂ ಅವರಿಗೆ ಸಾಕಷ್ಟು ಬೆದರಿಕೆಗಳು ಬರುತ್ತಿದ್ದವು. ಹಲವಾರು ಬಾರಿ ಅಮೃತರ ತಂದೆಯ ಜನ ಮನೆಗೆ ಬಂದು ಜಗಳವಾಡುತ್ತಿದ್ದರಲ್ಲದೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದರು.

ಆರಂಭಿಕ ತನಿಖೆಯಿಂದ ಮಾರುತಿ ರಾವ್ ತನ್ನ ಸೋದರ ಶ್ರವಣ್ ಜತೆ ಸೇರಿ ಪ್ರಣಯ್ ಕೊಲೆ ಸಂಚು ಹೂಡಿದ್ದರೆಂದು ತಿಳಿದು ಬಂದಿದೆ. ಇಬ್ಬರೂ ಈಗ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News