ತುಮಕೂರು: ಮಾದಕ ಪದಾರ್ಥಗಳ ಸೇವನೆಯ ಅಡ್ಡ ಪರಿಣಾಮ ಕುರಿತು ಅರಿವು ಕಾರ್ಯಕ್ರಮ

Update: 2018-09-15 12:05 GMT

ತುಮಕೂರು,ಸೆ.15: ಮಾದಕ ವಸ್ತುಗಳ ಸೇವನೆಯು ಕಳ್ಳತನ, ಸುಳ್ಳು ಹೇಳುವುದು, ಕೌಟುಂಬಿಕ ಕಲಹ, ಅತ್ಯಾಚಾರ, ಮತ್ತಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಿ ಯುವಜನರು ತಪ್ಪು ದಾರಿ ತುಳಿಯುವಂತೆ ಮಾಡುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲಭವನ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿ ಶಿಕ್ಷಣ ಇಲಾಖೆ ಹಾಗೂ ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ನಗರದ ಜಿಲ್ಲಾ ಬಾಲ ಭವನದಲ್ಲಿಂದು ಏರ್ಪಡಿಸಿದ್ದ 'ಮಾದಕ ಪದಾರ್ಥಗಳ ಸೇವನೆಯ ಅಡ್ಡ ಪರಿಣಾಮ' ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಿದ್ಯಾವಂತ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ತಂದೆ-ತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಂಡ ಕನಸಿಗೆ ತಣ್ಣೀರೆರಚಿದಂತಾಗುತ್ತಿದೆ. ಪೋಷಕರು ನಮ್ಮ ಭವಿಷ್ಯ ರೂಪಿಸಲು ಮಾಡುತ್ತಿರುವ ತ್ಯಾಗದ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು. ಜೀವನದಲ್ಲಿ ಉತ್ತಮ ಗುರಿ ಹೊಂದಿ ಅದನ್ನು ಸಾಧಿಸುವ ಮನಸು ಮಾಡಬೇಕು. ತಮ್ಮ ಕಾಲೇಜು ಜೀವನವನ್ನು ಅಡ್ಡದಾರಿ ಹಿಡಿದು ಹಾಳು ಮಾಡಿಕೊಳ್ಳದೆ ಕುಟುಂಬದವರು ಹೆಮ್ಮೆ ಪಡುವಂತೆ ಬದುಕಬೇಕೆಂದು ಕಿವಿ ಮಾತು ಹೇಳಿದರು. 

ಅಚರ್ಡ್ ಮದ್ಯವರ್ಜನ ಮತ್ತು ಪುನರ್ವಸತಿ ಕೇಂದ್ರದ ನಿರ್ವಾಹಕ ನಿರ್ದೇಶಕ ಡಾ.ಸದಾಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಮಾದಕ ವ್ಯಸನಕ್ಕೆ ಬಲಿಯಾದವರಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮಾದಕ ಲೋಕವು ತನ್ನದೇ ಭ್ರಮಾ ಲೋಕವನ್ನು ಸೃಷ್ಟಿ ಮಾಡಿ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಇದರಿಂದ ಸಿಗುವ ಕ್ಷಣಿಕ ಸುಖಕ್ಕೆ ಆಕರ್ಷಿತರಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳಬೇಡಿ ಎಂದು ಬುದ್ದಿ ಮಾತು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಕಳ್ಳತನ ಮಾಡದಿರುವುದು, ಸುಳ್ಳು ಹೇಳದಿರುವುದು, ಕೊಲೆ ಮಾಡದಿರುವುದು, ಮಾದಕ ದ್ರವ್ಯಗಳ ಸೇವನೆ ಮಾಡದಿರುವುದು ಸೇರಿದಂತೆ ಬುದ್ಧನ ಪಂಚಶೀಲಗಳನ್ನು ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಸೇವನೆಯು ಮನುಷ್ಯನನ್ನು ಸಾಮಾಜಿಕವಾಗಿ,ಆರ್ಥಿಕವಾಗಿ,ಆಧ್ಯಾತ್ಮಿಕವಾಗಿ,ನೈತಿಕವಾಗಿ ಅಥಃಪತನಕ್ಕೀಡು ಮಾಡುತ್ತದೆ ಎನ್ನುವ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ನಾವೆಲ್ಲಾ ಅರಿಯಬೇಕು ಎಂದರು. 

ವಿದ್ಯಾವಂತ ಯುವ ಜನರು ಹೆಚ್ಚಾಗಿ ಮಾದಕದ ವಸ್ತುಗಳಿಗೆ ದಾಸರಾಗುತ್ತಿರುವುದು ವಿಷಾದನೀಯ ಸಂಗತಿ. ಯುವಕರನ್ನು ದೈಹಿಕವಾಗಿ, ಚಾರಿತ್ರಿಕವಾಗಿ, ಮಾನಸಿಕವಾಗಿ ಬಲಗೊಳಿಸಿದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವಜನರು ತಮ್ಮ ಜೀವಮಾನದಲ್ಲಿ ಮಾದಕ ವಸ್ತುಗಳಿಗೆ ದಾಸರಾಗುವುದಿಲ್ಲವೆಂದು ಮನೋಪ್ರತಿಜ್ಞೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್.ನಾಗರತ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News