ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು ಆದ್ಯತೆ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ

Update: 2018-09-15 12:28 GMT

ಶಿವಮೊಗ್ಗ, ಸೆ. 15: ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಕುಂಟುತ್ತಾ ಸಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 7ವರ್ಷಗಳಿಂದ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಒಂದೂ ಸಹ ಪೂರ್ಣಗೊಂಡಿಲ್ಲ. ಅರಣ್ಯ ಭೂಮಿ ಸಮಸ್ಯೆ ಕಾರಣದಿಂದ ಟ್ಯಾಂಕ್ ನಿರ್ಮಾಣಕ್ಕೆ ಅಡಚಣೆ ಉಂಟಾಗಿದೆ. ಇದನ್ನು ನಿವಾರಿಸಿ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಳೆದ 16 ವರ್ಷದಿಂದೀಚೆಗೆ ಆರಂಭವಾಗಿರುವ ಹಲವು ಕುಡಿಯುವ ನೀರಿನ ಕಾಮಗಾರಿಗಳೂ ಇನ್ನೂ ಪೂರ್ಣಗೊಂಡಿಲ್ಲ. ಈ ಕುರಿತು ಇತ್ತೀಚೆಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಇವುಗಳನ್ನು ಪೂರ್ಣಗೊಳಿಸಲು 5500 ಕೋಟಿ ರೂ. ಅಗತ್ಯವಿದ್ದು, ಅನುದಾನ ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತ್ ವ್ಯಾಪ್ತಿ ಮಾತ್ರವಲ್ಲದೆ ರಾಜ್ಯ ವಲಯದ ಕುಡಿಯುವ ನೀರಿನ ಕಾಮಗಾರಿ ಯೋಜನೆಯನ್ನು ಅನುಷ್ಟಾನಗೊಳಿಸುವ ಪೂರ್ವದಲ್ಲಿ ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ಸಚಿವರು ಸೂಚನೆ ನೀಡಿದರು. ರಾಜ್ಯ ವಲಯದ ಕಾಮಗಾರಿಗಳ ಅನುಷ್ಟಾನದ ಕುರಿತು ಕ್ಷೇತ್ರದ ಶಾಸಕರ ಗಮನಕ್ಕೆ ತಾರದೆ ನೇರವಾಗಿ ಅಧಿಕಾರಿಗಳು ಅನುಷ್ಟಾನಗೊಳಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ದೂರಿದರು.

ಮಳೆ ಮತ್ತು ಬೆಳೆ ಹಾನಿ ಪ್ರಸ್ತಾಪ ಸಲ್ಲಿಕೆ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 82 ಕೋಟಿ ರೂ. ಹಾನಿ ಸಂಭವಿಸಿರುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ರೀತಿ ಮಳೆಯಿಂದಾಗಿ ಅಡಿಕೆಗೆ ಉಂಟಾಗಿರುವ ಕೊಳೆ ರೋಗದಿಂದ ಸುಮಾರು 13 ಕೋಟಿ ರೂ. ನಷ್ಟ ಉಂಟಾಗಿರುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಸಭೆಗೆ ತಿಳಿಸಿದರು.

ಕೊಳೆರೋಗದಿಂದ ಅಡಿಕೆ ಬೆಳೆಗೆ ಮಾತ್ರವಲ್ಲದೆ ಅಡಿಕೆ ಮರಕ್ಕೆ ಉಂಟಾಗಿರುವ ಹಾನಿಯನ್ನು ಸಹ ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ರೈತರಿಗೆ ಗೊಬ್ಬರ ನೀಡುವಾಗ ಸಹಕಾರ ಸಂಘಗಳಲ್ಲಿ ತೂಕದಲ್ಲಿ ವ್ಯಾಪಕ ಮೋಸ ಮಾಡುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಅವರು ಒತ್ತಾಯಿಸಿದರು. ಈ ಕುರಿತು ಎಲ್ಲಾ ಗೊಬ್ಬರ ಕೇಂದ್ರಗಳ ಹೊರಗೆ ರೈತರಿಗೆ ಅರಿವು ಮೂಡಿಸಲು ಫಲಕ ಅಳವಡಿಸಬೇಕು. ತೂಕದಲ್ಲಿ ವ್ಯತ್ಯಾಸ ಮಾಡುವ ಕೇಂದ್ರಗಳ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಚಿವರು ಸೂಚನೆ ನೀಡಿದರು.

ಮರಳು ನೀತಿಯಲ್ಲಿ ಬದಲಾವಣೆಗೆ ಪ್ರಯತ್ನ: ಜನಸಾಮಾನ್ಯರಿಗೂ ಮರಳು ಸುಲಭವಾಗಿ ಸಿಗುವಂತಾಗಲು ಮರಳು ನೀತಿಯಲ್ಲಿ ಅಗತ್ಯ ಬದಲಾವಣೆ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಜನಸಾಮಾನ್ಯರಿಗೆ ಮಾತ್ರ ಮನೆಕಟ್ಟಲು ಮರಳು ಸಿಗುತ್ತಿಲ್ಲ ಎಂದು ಹಲವು ಶಾಸಕರು ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮರಳು ಅಕ್ರಮ ಸಾಗಾಟ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮರಳು ನೀತಿಯಿಂದಾಗಿ ಮರಳಿನ ಸುಲಭ ಲಭ್ಯತೆಗೆ ತೊಡಕಾಗಿದ್ದರೆ ಅದರಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದರು.

ಮರಳು ಸಾಗಾಟ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿರುವ ಸಣ್ಣಪುಟ್ಟ ವಾಹನಗಳನ್ನು ಮೂರು ದಿನಗಳಿಗಿಂತ ಹೆಚ್ಚು ಕಾಲ ವಶದಲ್ಲಿರಿಸದೆ, ಪ್ರಕರಣ ದಾಖಲಿಸಿ ಬಿಟ್ಟು ಕೊಡಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News