ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳಕ್ಕೆ ಸರ್ವ ಪ್ರಯತ್ನ: ಸಚಿವ ಡಿ.ಸಿ.ತಮ್ಮಣ್ಣ

Update: 2018-09-15 12:30 GMT

ಶಿವಮೊಗ್ಗ, ಸೆ. 15: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಸ್ತುತ ನಷ್ಟದಲ್ಲಿದ್ದು, ಆದಾಯ ಕ್ರೋಡೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ತಿಳಿಸಿದರು.

ಅವರು ಶನಿವಾರ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ 5 ನೂತನ ಬಸ್ ಮಾರ್ಗಗಳಿಗೆ ಚಾಲನೆ ಹಾಗೂ ತಾಯಿ ಮಡಿಲು ಕೇಂದ್ರವನ್ನು ಉದ್ಘಾಟಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೆಎಸ್‍ಆರ್ಟಿಸಿ ಸುಮಾರು 500 ರಿಂದ 600ಕೋಟಿ ರೂ. ನಷ್ಟದಲ್ಲಿದೆ. ಡಿಸೇಲ್ ಬೆಲೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಟಿಕೆಟ್ ದರ ಹೆಚ್ಚಳ ಸಂದರ್ಭದಲ್ಲಿ ಸಾಮಾನ್ಯ ಬಸ್‍ಗಳಲ್ಲಿ ಸಂಚರಿಸುವ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು. ಸಂಸ್ಥೆಯ ಆದಾಯವನ್ನು ಹೆಚ್ಚಿಸಲು ಎಲ್ಲಾ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಬಸ್ ನಿಲ್ದಾಣಗಳಲ್ಲಿ ಎಂಎಸ್‍ಐಎಲ್ ಉತ್ಪನಗಳ ಮಳಿಗೆಗಳನ್ನು ತೆರೆಯಲಾಗುವುದು. ಇದೇ ರೀತಿ ಬಸ್ ನಿಲ್ದಾಣಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಸಹ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದರು.

ಪ್ರಸ್ತುತ ರಾಜ್ಯ ಸಾರಿಗೆ ಬಸ್‍ಗಳು 5 ರಿಂದ 6 ಲಕ್ಷ ಕಿಮಿ ಓಡಿದ ಬಳಿಕ ಅದರ ಸೇವೆಯನ್ನು ಹಿಂತೆಯಲಾಗುತ್ತಿದೆ. ಅಂತಹ ಬಸ್‍ಗಳ ಚಾಸ್ಸಿಯನ್ನು ಬಳಸಿಕೊಂಡು ಹೊಸ ಬಾಡಿ ಕಟ್ಟುವ ಮೂಲಕ ನಷ್ಟವನ್ನು ಸರಿದೂಗಿಸಲು ಯೋಚಿಸಲಾಗಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಹೊಸ ಬಸ್‍ಗಳು ಸೇವೆಗೆ ಲಭ್ಯವಾಗಲಿವೆ ಎಂದರು.

ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರಸ್ತುತ ಶಿವಮೊಗ್ಗದಲ್ಲಿ ಕಂದಮ್ಮಗಳಿಗೆ ಹಾಲೂಡಿಸಲು ಪ್ರತ್ಯೇಕವಾದ ತಾಯಿ ಮಡಿಲು ಎಂಬ ಕೇಂದ್ರವನ್ನು ತೆರೆಯಲಾಗಿದ್ದು, ಎಲ್ಲಾ ಬಸ್ ನಿಲ್ದಾಣಗಳಲ್ಲಿ ಇಂತಹ ಕೇಂದ್ರವನ್ನು ಆರಂಭಿಸಲಾಗುವುದು. ಇದೇ ರೀತಿ ಬಸ್ ನಿಲ್ದಾಣಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಬಸ್ ನಿಲ್ದಾಣಗಳಲ್ಲಿ ನ್ಯಾಪ್‍ಕಿನ್ ಲಭ್ಯತೆ ಹಾಗೂ ಅದರ ಸೂಕ್ತ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ, ಕುಮಾರ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಕೆಎಸ್‍ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಂ.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News