ಮೂಡಿಗೆರೆ: ಕಾರ್ಮಿಕನ ಹತ್ಯೆಗೈದು ಹೂತು ಹಾಕಿದ ಅಸ್ಸಾಂ ಮೂಲದ ಕಾರ್ಮಿಕರು

Update: 2018-09-15 12:37 GMT

ಮೂಡಿಗೆರೆ, ಸೆ.15: ಕಾಫಿ ತೋಟವೊಂದಕ್ಕೆ ಕೂಲಿ ಕೆಲಸಕ್ಕೆಂದು ಬಂದಿದ್ದ ಅಸ್ಸಾಂ ಮೂಲದ ಕಾರ್ಮಿಕರು ತಮ್ಮೊಂದಿಗೆ ಕೆಲಸ ಮಾಡಿಕೊಂಡಿದ್ದ ಅವರದ್ದೇ ಊರಿನ ವ್ಯಕ್ತಿಯನ್ನು ಕೊಲೆ ಮಾಡಿ, ಶವವನ್ನು ಮಣ್ಣಿನಲ್ಲಿ ಹೂತುಹಾಕಿ ಮರಳಿ ಅಸ್ಸಾಂಗೆ ತೆರಳಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರೇ ಬೇಧಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಕಳೆದ ಕೆಲ ತಿಂಗಳ ಹಿಂದೆ ತಾಲೂಕಿನ ದೇವವೃಂದದ ಬೆಳಗಾರರೊರ್ವರ ಕಾಫಿ ತೋಟಕ್ಕೆ ಕಾರ್ಮಿಕರಾಗಿ ಅಸ್ಸಾಂನಿಂದ ನಾಲ್ಕೈದು ಕುಟುಂಬ ಬಂದಿದ್ದವು. ಕಳೆದ ವಾರ ಅವರೊಳಗೆ ಪರಸ್ಪರ ಜಗಳವಾಗಿತ್ತು ಎಂದು ಹೇಳಲಾಗುತ್ತಿದ್ದು, ಆ ವೇಳೆ ಇಬ್ಬರು ಕಾರ್ಮಿಕರು ಸೇರಿ ತಮ್ಮೊಂದಿಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕೊಂದು ಪೊದೆಯೊಳಗೆ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾರೆಂದು ತಿಳಿದು ಬಂದಿದೆ.

ಹತ್ಯೆ ಬಳಿಕ ಏನೂ ತಿಳಿಯದವರಂತೆ ನಟಿಸುತ್ತಾ ಎಲ್ಲರೂ ಅಸ್ಸಾಂ ರಾಜ್ಯಕ್ಕೆ ವಾಪಾಸಾಗಿದ್ದಾರೆ. ಕೂಲಿ ಕೆಲಸಕ್ಕೆಂದು ಕರ್ನಾಟಕಕ್ಕೆ ತೆರಳಿದ್ದವರೆಲ್ಲಾ ವಾಪಾಸು ಬಂದಿದ್ದರೆ, ಓರ್ವ ವ್ಯಕ್ತಿ ಮಾತ್ರ ಬಂದಿಲ್ಲವೆಂದು ಹತ್ಯೆಯಾದ ವ್ಯಕ್ತಿಯ ಕುಟುಂಬದವರು ಗಾಬರಿಗೊಂಡು ಅಸ್ಸಾಂನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ವಿಚಾರಣೆಗೆಂದು ಇಬ್ಬರನ್ನು ಅಸ್ಸಾಂ ರಾಜ್ಯದ ಪೊಲೀಸರು ಕರೆದೊಯ್ದು, ತೀವ್ರ ವಿಚಾರಣೆ ನಡೆಸಿದಾಗ, ತಾವು ಕೆಲಸ ಮಾಡಿಕೊಂಡಿದ್ದ ತೋಟದಲ್ಲೇ ಆ ವ್ಯಕ್ತಿಯನ್ನು ಹತ್ಯೆ ಮಾಡಿ ಮಣ್ಣು ಮಾಡಿದ್ದೇವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಅವರ ಮಾಹಿತಿಯಂತೆ ಅಸ್ಸಾಂ ಪೊಲೀಸರು, ಗೋಣಿಬೀಡು ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. 

ಕಾರ್ಯ ಪ್ರವೃತ್ತರಾದ ಗೋಣಿಬೀಡು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಶನಿವಾರ ರಾತ್ರಿ ಪೊಲೀಸರ ತಂಡ ಅಸ್ಸಾಂಗೆ ತೆರಳಿ ಆರೋಪಿಗಳನ್ನು ಕರೆ ತರಲಿದ್ದಾರೆ. ಆರೋಪಿಗಳನ್ನು ಕರೆ ತಂದ ಬಳಿಕವಷ್ಟೇ ಆರೋಪಿಗಳ ಮತ್ತು ಕೊಲೆಯಾದ ವ್ಯಕ್ತಿ ಹೆಸರು ತಿಳಿಯಲಿದೆ. ಅಲ್ಲದೆ ಅವರು ಬಂದ ಮೇಲೆಯೆ ಮತ್ತು ಹೂತು ಹಾಕಿರುವ ಶವವನ್ನು ಮೇಲಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News