ಅಪರೇಷನ್ ಕಮಲ ನಮ್ಮ ಬಳಿ ನಡೆಯಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ

Update: 2018-09-15 17:44 GMT

ದಾವಣಗೆರೆ,ಸೆ.15: ಕೇಂದ್ರ ಸರಕಾರ ರಫೆಲ್ ಯದ್ದ ವಿಮಾನ ಖರೀದಿಯಲ್ಲಿ ದೊಡ್ದ ಹಗರಣದ ನಡೆಸಿದೆ ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಡಾ.ಅಂಬೇಡ್ಕರ ವೃತ್ತದಿಂದ ಮೆರವಣೆಗೆ ಆರಂಭಿಸಿ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರಕಾರ ವಿರುದ್ದ ಘೋಷಣೆಗಳನ್ನು ಕೂಗಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಮೋದಿ ಸರ್ಕಾರ ಈಡೇರಿಸಿಲ್ಲ. ಇಂತಹ ಸರ್ಕಾರವನ್ನು ಮನೆಗೆ ಕಳುಹಿಸುವ ದಿನಗಳು ದೂರವಿಲ್ಲ. ಇದಕ್ಕಾಗಿ ದೇಶಾದ್ಯಂತ ಕಾಂಗ್ರೆಸ್ ಬೃಹತ್ ಹೋರಾಟ ಆರಂಭಿಸಿದೆ ಎಂದರು.

ವಿಪ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದೇಶದ ಜನರಿಗೆ ಬೆಲೆ ಏರಿಕೆಯನ್ನು ಕೊಡುಗೆಯಾಗಿ ನೀಡಿ, ಜನರು ತತ್ತರಿಸುವಂತೆ ಮಾಡಿದೆ. ಜನರಿಗೆ ಸುಳ್ಳು ಭರವಸೆ ನೀಡುತ್ತಿರುವ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. 

ಶಾಸಕ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್ ಸಾಬ್ ಪಾಲಿಕೆ, ಸದಸ್ಯ ದಿನೇಶ್ ಕೆ.ಶೆಟ್ಟಿ. ಸೈಯದ್ ಸೈಫುಲ್ಲಾ, ಎ.ನಾಗರಾಜ್, ಅಯುಬ್ ಪೈಲ್ವಾನ್ ಸೇರಿದಂತೆ ಪಾಲಿಕೆ ಸದಸ್ಯರು, ತಾಪಂ ಸದಸ್ಯರು, ಜಿಪಂ ಸದಸ್ಯರು ಸೇರಿದಂತೆ ನೂರಾರು   ಕಾರ್ಯಕರ್ತರು ಪಾಲ್ಗೊಂಡಿದ್ದರು.   

ಅಪರೇಷನ್ ಕಮಲ ನಮ್ಮ ಬಳಿ ನಡೆಯಲ್ಲ: ಬಿಜೆಪಿಗೆ ಜಾರಕಿಹೊಳಿನೂ ಹೋಗಲ್ಲ, ಶಾಮನೂರೂ ಹೋಗಲ್ಲ. ಒಂದು ವೇಳೆ ಕಾಂಗ್ರೆಸ್ಸಿಗರಿಗೆ ಕೈ ಹಾಕಿದರೆ, ಬಿಜೆಪಿಯವರನ್ನು ಕರೆ ತಂದು ನಾವೂ ಮುಯ್ಯಿಗೆ ಮುಯ್ಯಿ ತೀರಿಸುತ್ತೇವಷ್ಟೇ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ನಗರದಲ್ಲಿ ಕೇಂದ್ರ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಖಂಡಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಂಪರ್ಕ ಮಾಡಲು ಬಿಜೆಪಿಯವರಿಗೆ ಧೈರ್ಯಬೇಕು. ಅವರಪ್ಪನ ಕೈಯಲ್ಲೂ ನನ್ನನ್ನು ಸೆಳೆಯುವುದಕ್ಕೆ ಸಾಧ್ಯವಿಲ್ಲ ಎಂದರು. 

ಮಂತ್ರಿ ಸ್ಥಾನಕ್ಕೆ ನಾನು ಅವಲಂಬಿತನಾಗಿಲ್ಲ. ಸಚಿವ ಸ್ಥಾನ ಬಂದರೆ ಬರಲಿ, ಬಿಟ್ಟರೆ ಬಿಡಲಿ. ನಾನು ಯಾವ ಸ್ಥಾನದಲ್ಲಿದ್ದರೂ ಕೆಲಸ ಮಾಡುವವನು. ಇಷ್ಟು ವರ್ಷವೂ ಅದನ್ನೇ ಮಾಡಿಕೊಂಡು ಬಂದವನು. ಆಪರೇಷನ್ ಕಮಲ ಇವೆಲ್ಲಾ ನಮ್ಮ ಬಳಿ ನಡೆಯುವುದಿಲ್ಲ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಅವರು ಹೇಳಿದರು. 

ವಿಪಕ್ಷ ಬಿಜೆಪಿಯವರು ಹೇಳುತ್ತಿರುವುದೆಲ್ಲವೂ ಸುಳ್ಳು. ಒಂದು ವೇಳೆ ಬಿಜೆಪಿ ಆಪರೇಷನ್ ಕಮಲ ಮಾಡಿದರೆ, ನಾವೂ ಅದಕ್ಕೆ ಪ್ರತಿಯಾಗಿ ಆಪರೇಷನ್ ಮಾಡುತ್ತೇವೆ. ಕಾಂಗ್ರೆಸ್ಸಿನವರನ್ನು ಬಿಜೆಪಿ ಕರೆದುಕೊಂಡರೆ, ನಾವೂ ಬಿಜೆಪಿಯವರನ್ನೇ ಕರೆದುಕೊಳ್ಳುತ್ತೇವೆಂಬ ಅರಿವಿರಲಿ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News