ಸಹಕಾರಿ ಸಂಘ ಸಂಸ್ಥೆಗಳು ಬಡವರು, ಅಸಹಾಯಕರ ಅಭಿವೃದ್ದಿಗೆ ದುಡಿಯಬೇಕು: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-09-15 18:10 GMT

ಚಿಕ್ಕಮಗಳೂರು, ಸೆ.15 ಸಹಕಾರಿ ಸಂಘ ಸಂಸ್ಥೆಗಳು ತಮ್ಮ ವೈಯಕ್ತಿಕ ಲಾಭಕ್ಕೆ ಸೀಮಿತಗೊಳ್ಳದೆ ಬಡವರು ಮತ್ತು ಅಸಹಾಯಕರ ಅಭಿವೃದ್ದಿಗೆ ದುಡಿಯಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸಲಹೆ ಮಾಡಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ನಡೆದ ಶ್ರೀ ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರ ಶೇರು ಹಣದಿಂದ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ಸ್ಥಾಪನೆಯಾಗುತ್ತವೆ. ಅವರ ಹಣದಿಂದ ಅಭಿವೃದ್ದಿ ಹೊಂದುತ್ತವೆ ಎಂದ ಅವರು ಸಂಘಗಳು ಅದನ್ನು ಮರೆಯಬಾರದು. ಬಡವರು ಮತ್ತು ಅಸಹಾಯಕರಿಗೆ ಸ್ಪಂದಿಸಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರಿ ಸಂಘಗಳನ್ನು ಸ್ಥಾಪಿಸುವುದು ಸುಲಭ. ಆದರೆ ಅವುಗಳನ್ನು ಉಳಿಸಿ ಬೆಳೆಸುವುದು ಬಹಳ ಕಷ್ಟದ ಕೆಲಸ. ಆರಂಭದಲ್ಲಿ ಯಾರೂ ಷೇರನ್ನು ಕೊಡುವುದಿಲ್ಲ. ನಂತರ ಸಂಘ ಬೆಳೆದಂತೆ ಹಣಕಾಸಿನ ವಿಷಯದಲ್ಲಿ ಒಳತಿಕ್ಕಾಟ ನಡೆಯುತ್ತವೆ. ಅವೆಲ್ಲವನ್ನೂ ನಿಭಾಯಿಸಿ ವಾಸವಿ ಸೌಹಾರ್ದ ಸಹಕಾರಿ ಸಂಘ ಬೆಳೆದು ಬಂದಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎ.ವಾಸುದೇವ ಮೂರ್ತಿ, 1992 ರಲ್ಲಿ ಕೇವಲ 9 ಜನ ನಿರ್ದೇಶಕರಿಂದ ಸ್ಥಾಪನೆಗೊಂಡ ಸಂಸ್ಥೆ ಕಳೆದ 25 ವರ್ಷಗಳಲ್ಲಿ 600 ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆಸಿದೆ. ಕಳೆದ ಸಾಲಿನಲ್ಲಿ 1 ಕೋಟಿ 50 ಲಕ್ಷದ 49 ಸಾವಿರ ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘ ಸಧೃಡವಾಗಿ ಬೆಳೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ರಜತ ಮಹೋತ್ಸವದ ನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಇದೇ ವೇಳೆ ಸಂಘದಲ್ಲಿ ನೂತನವಾಗಿ ಪ್ರಾರಂಭಿಸಲಾದ ಮಹಿಳಾ ಸಬಲೀಕರಣ ಉದ್ಯಮ ನಿಧಿ ಯೋಜನೆ ಮತ್ತು ದಿ.ಎಂ.ಎ.ಶ್ರೀಧರ ಮೂರ್ತಿ ವಿದ್ಯಾರ್ಥಿವೇತನ ನಿಧಿ ಯೋಜನೆಯನ್ನು ಉದ್ಘಾಟಿಸಲಾಯಿತು.

ಆರ್ಯವೈಶ್ಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಸಂಘದ ಪಿಗ್ಮಿ ಸಂಗ್ರಹಕಾರು ಮತ್ತು ಸಿಬ್ಬಂಧಿಗಳನ್ನು ಸನ್ಮಾನಿಸಲಾಯಿತು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ಕೆ.ಎಸ್.ಸತೀಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘುನಂದನ್, ವಾಸವಿ ಯುವಜನ ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ, ಪಿ.ಎಸ್.ವೆಂಕಟೇಶ್, ವಾಸವಿ ಸೇವಾ ಟ್ರಸ್ಟ್ ಅಧ್ಯಕ್ಷ ಬದರೀನಾಥ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಬಾ ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News