ಕೊಡಗು ಮಹಾಹಾನಿ: ಕಾರಣ ಮತ್ತು ಪರಿಹಾರದ ತಾಂತ್ರಿಕ ವರದಿ ಸಲ್ಲಿಸಿದ ಹೆಚ್.ವಿಶ್ವನಾಥ್

Update: 2018-09-15 18:33 GMT

ಮಡಿಕೇರಿ, ಸೆ.15: ಮರಗಳ ನಾಶ, ಕೃಷಿ ಚಟುವಟಿಕೆಗಳಿಗಾಗಿ ಭೂಮಿಯನ್ನು ಸಮತಟ್ಟು ಮಾಡುವುದು ಹಾಗೂ ಕಟ್ಟಡಗಳ ನಿರ್ಮಾಣ ಕಾರ್ಯಗಳೊಂದಿಗೆ ಭೂ ಕಂಪನದಿಂದ ಭೂಮಿ ಬಿರುಕು ಬಿಟ್ಟು, ಮಳೆನೀರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಪದರಗಳಲ್ಲಿ ಇಳಿದಿರುವುದು ಕೊಡಗಿನಲ್ಲಿ ನಡೆದಿರುವ ಭೂ ಕುಸಿತಕ್ಕೆ ಕಾರಣವಾಗಿದೆಯೆನ್ನುವ ಅಂಶವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ನೇತೃತ್ವದ ತಾಂತ್ರಿಕ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಮೈಸೂರಿನ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್‍ನ ತಜ್ಞ ಹನ್ನೊಂದು ಮಂದಿ ಇಂಜಿನಿಯರ್ಸ್‍ಗಳನ್ನು ಒಳಗೊಂಡ ತಾಂತ್ರಿಕ ಸಮಿತಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಅಂದಾಜು 10 ರಿಂದ 12 ದಿನಗಳ ಕಾಲ ಪ್ರವಾಸ ಮಾಡಿ ಸಿದ್ಧಪಡಿಸಿದ ವರದಿಯನ್ನು ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಹಸ್ತಾಂತರಿಸಿದರು.

ಪ್ರಾಕೃತಿಕ ವಿಕೋಪದಿಂದ ಹದಗೆಟ್ಟ ರಸ್ತೆ, ತಡೆಗೋಡೆಗಳು, ಸಣ್ಣ ಸೇತುವೆಗಳ ನಿರ್ಮಾಣವನ್ನು ಯಾವ ರೀತಿಯಲ್ಲಿ ಕೈಗೊಳ್ಳಬಹುದೆನ್ನುವ ವಿಸ್ತೃತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುತ್ತಿರುವುದಾಗಿ ವಿಶ್ವನಾಥ್ ಅವರು ತಿಳಿಸಿದರು. ಈ ಸಂದರ್ಭ ಎನ್.ಪಿ.ಸುಮನ್ ಪನ್ನೇಕರ್, ತಾಂತ್ರಿಕ ಸಮಿತಿಯ ಸದಸ್ಯರುಗಳಾದ ಎಂ.ಲಕ್ಷ್ಮಣ್, ಎ.ಎಸ್. ಸತೀಶ್, ಜೆಡಿಎಸ್ ಪ್ರಮುಖರಾದ ಕೆ.ಎಂ. ಗಣೇಶ್ ಉಪಸ್ಥಿತರಿದ್ದರು.

ಅತಿವೃಷ್ಟಿಯ ಹಿನ್ನೆಲೆಯಲ್ಲಿ ಗುಡ್ಡ ಕುಸಿತಕ್ಕೆ ಕಾರಣಗಳನ್ನು ತಿಳಿಸಿರುವುದರೊಂದಿಗೆ, ಭವಿಷ್ಯದಲ್ಲಿ ಇಂತಹ ಅವಘಡಗಳು ನಡೆಯದಂತೆ ಮಾಧವ ಗಾಡ್ಗಿಲ್ ಮತ್ತು ಡಾ. ಕಸ್ತೂರಿ ರಂಗನ್ ವರದಿಯನ್ನು ಎನ್‍ಜಿಟಿ (ರಾಷ್ಟ್ರೀಯ ಹಸಿರು ಪ್ರಾಧಿಕಾರ) ಆದೇಶದಂತೆ ಅನುಷ್ಟಾನಗೊಳಿಸಬೇಕೆನ್ನುವ ಅಂಶವನ್ನು ಸೇರ್ಪಡೆಗೊಳಿಸಿರುವುದು ಗಮನಾರ್ಹ.

ಭೂ ಕುಸಿತಕ್ಕೆ ಕಾರಣಗಳು: ಪ್ರಸಕ್ತ ಸಾಲಿನ ಜುಲೈ 9 ರಂದು ಸಂಭವಿಸಿದ ಭೂ ಕಂಪನ ಭೂಮಿಯ 10 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಇದರಿಂದ ಬೆಟ್ಟಗುಡ್ಡಗಳಲ್ಲಿ ಬಿರುಕುಗಳು ಏರ್ಪಟ್ಟು, ಈ ಬಿರುಕುಗಳಲ್ಲಿ ಮಳೆ ನೀರು ಹರಿದು ಭೂ ಕುಸಿತಕ್ಕೆ ಕಾರಣವಾಗಿರಬಹುದೆಂದು ವಿಶ್ಲೇಷಿಸಲಾಗಿದೆಯಲ್ಲದೆ, ಬೆಟ್ಟಗಳ ಕುಸಿತದಿಂದ ಹೆಚ್ಚಿನ ಪ್ರಮಾಣದ ಮಣ್ಣು ನೀರಿನ ಹರಿವಿನ ದಾರಿಯನ್ನೆ ಮುಚ್ಚಿ ಬಿಟ್ಟಿರುವುದು ಮತ್ತು ನೀರಿನ ಹರಿವನ್ನು ಬದಲಾಯಿಸಿರುವುದು ಹಾನಿಗೆ ಕಾರಣವೆಂದು ಅಭಿಪ್ರಾಯಿಸಲಾಗಿದೆ.

ಮುಂಬರುವ ದಿನಗಳಲ್ಲಿ ಇಂತಹ ಅವಘಡಗಳು ನಡೆಯದಂತೆ ತಡೆಯಲು ಜಿಲ್ಲೆಯ ಪರಿಸರ ಸಂರಕ್ಷಣೆಗೆ ಪ್ರತ್ಯೇಕ ನೀತಿ ಜಾರಿಯಾಗಬೇಕು, ಅಭಿವೃದ್ಧಿಯ ಹೆಸರಿನಲ್ಲಿ ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದು, ನೆರೆಯ ಕೇರಳಕ್ಕೆ ವಿದ್ಯುಚ್ಛಕ್ತಿ ಸರಬರಾಜು ಮಾಡುವ ವ್ಯವಸ್ಥೆಗಳನ್ನು ಕೂಡಲೆ ಸ್ಥಗಿತಗೊಳಿಸಬೇಕು. ಇದರಿಂದ ಸಾವಿರಾರು ಮರಗಳನ್ನು ಸಂರಕ್ಷಿಸುವ ಮೂಲಕ ಬೆಟ್ಟಗುಡ್ಡಗಳ ನಾಶವನ್ನು ತಡೆಯಬಹುದೆಂದು ತಿಳಿಸಲಾಗಿದೆ. ಮರಳು ಗಣಿಗಾರಿಗೆ ಸೇರಿದಂತೆ ಜಿಲ್ಲೆಯ ಪರಿಸರಕ್ಕೆ ಹಾನಿಮಾಡುವ ಯಾವುದೇ ಕೈಗಾರಿಕೆಗಳಿಗೆ ಅನುಮತಿಯನ್ನು ನೀಡಕೂಡದು, ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವುದನ್ನು ಅಪರಾಧವೆಂದು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ತಿಳಿಸಲಾಗಿದೆ.

ನಡೆದಿರುವ ಪ್ರಾಕೃತಿಕ ವಿಕೋಪ ಹಾಗೂ ಭವಿಷ್ಯದಲ್ಲಿ ಇದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿರುವುದರೊಂದಿಗೆ, ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಹೇಗೆ ಸಜ್ಜುಗೊಳಿಸಬಹುದೆನ್ನುವುದಕ್ಕೆ ಪೂರಕವಾದ ತಾಂತ್ರಿಕ ಸಲಹೆಯನ್ನು ವರದಿಯಲ್ಲಿ ನೀಡಲಾಗಿದೆ.

ಪ್ರವಾಸೋದ್ಯಮದ ಚೇತರಿಕೆಗೆ ಒತ್ತು: ವರದಿ ಸಲ್ಲಿಕೆಯ ಬಳಿಕ ಹೆಚ್. ವಿಶ್ವನಾಥ್ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಇಂದಿನ ಇಂಜಿನಿಯರ್ಸ್ ಡೇ ಹಿನ್ನೆಲೆಯಲ್ಲಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಕೊಡಗು ಪ್ರವಾಸೋದ್ಯಮದ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿರುವ ಹಂತದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಇದರಿಂದ ಆಗಿರುವ ಹಾನಿಯನ್ನು ಸರಿಪಡಿಸುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News