ಸಿಲ್ವರ್ ಓಕ್ ಮರಗಳ ಸಾಗಾಟಕ್ಕೆ ಅನುಮತಿ ನೀಡಿದ ಕೊಡಗು ಜಿಲ್ಲಾಡಳಿತ

Update: 2018-09-16 18:03 GMT

ಮಡಿಕೇರಿ, ಸೆ.15: ಜಿಲ್ಲೆಯಲ್ಲಿ ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಅತಿವೃಷ್ಟಿಯಿಂದ ಬಿದ್ದಿರುವ ಸಿಲ್ವರ್ ಓಕ್ ಮರಗಳನ್ನು ಮಧ್ಯಮ ಸರಕು ವಾಹನ ಮತ್ತು ಸರಕು ಒಟ್ಟು ಸೇರಿ 12,000 ಕೆ.ಜಿ. ಮೀರದಂತೆ ಗರಿಷ್ಠ ತೂಕ ಹೊಂದಿರುವ ವಾಹನಗಳಲ್ಲಿ ಸಾಗಿಸಲು ಸೂಚಿಸಿರುವ ಮಾರ್ಗಗಳಲ್ಲಿ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 29 ರವರೆಗೆ ಅನುಮತಿ ನೀಡಲಾಗಿದೆ. 

ಆದೇಶದ ಉಲ್ಲಂಘನೆಯಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಅರಣ್ಯ, ಆರಕ್ಷಕ ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕ ಆಸ್ತಿಗಳ ರಕ್ಷಣೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆಯನ್ನು ಅಕ್ಟೋಬರ್ 29 ರವರೆಗೆ ನಿಷೇಧಿಸಲಾಗಿದೆ.

ಅತಿವೃಷ್ಟಿಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಸಿಲ್ವರ್ ಓಕ್ ಸೇರಿದಂತೆ ಇತರ ಮರಗಳು ಬಿದ್ದಿವೆ. ರಸ್ತೆಗಳಲ್ಲಿ ಹಾಗೂ ಇನ್ನಿತರೆ ಭಾಗಗಳಲ್ಲಿ ಬಿದ್ದಿರುವ ಈ ಮರಗಳನ್ನು ಕಡಿದು ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮಾಂತರ ರಸ್ತೆಗಳ ದುರಸ್ಥಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಸಿಲ್ವರ್ ಓಕ್ ಮರಗಳನ್ನು ಸಾಗಿಸುವ ಬಗ್ಗೆ ಅರಣ್ಯ, ಆರಕ್ಷಕ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಮುಂತಾದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿರುವ ಜಿಲ್ಲಾಧಿಕಾರಿಗಳು ಡಿಸೆಂಬರ್ ವರೆಗೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಿದ್ದಾರೆ. 

ಈ ಹಿಂದೆ ಕಾಫಿ ಬೆಳೆಗಾರರು ಹಾಗೂ ಮರ ವ್ಯಾಪಾರಿಗಳು ಸಿಲ್ವರ್ ಮರಗಳ ಸಾಗಾಟಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ತೋಟದಲ್ಲಿ ಬಿದ್ದಿರುವ ಮತ್ತು ಈ ಹಿಂದೆ ಕತ್ತರಿಸಿ ಇಟ್ಟಿದ್ದ ಮರಗಳ ಮಾರಾಟವೊಂದೇ ಪರ್ಯಾಯ ಮಾರ್ಗವೆಂದು ಅಭಿಪ್ರಾಯಪಟ್ಟಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News