ಅಮೆರಿಕ ನಿವಾಸಿಗಳಲ್ಲಿ ವಿದೇಶಿ ಸಂಜಾತರೆಷ್ಟು ಗೊತ್ತೇ?

Update: 2018-09-17 03:59 GMT

ಹೊಸದಿಲ್ಲಿ, ಸೆ.17: ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 14ರಷ್ಟು ಮಂದಿ ಅಂದರೆ ಪ್ರತಿ ಏಳು ಮಂದಿಯ ಪೈಕಿ ಒಬ್ಬರು ವಿದೇಶಿ ಸಂಜಾತರು ಎಂಬ ಅಂಶ ಅಮೆರಿಕದ ಜನಗಣತಿ ಮಂಡಳಿ ಕಳೆದ ವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಅಮೆರಿಕದ ಸಮುದಾಯ ಸಮೀಕ್ಷೆಯಿಂದ ತಿಳಿದುಬರುವಂತೆ, ವಿದೇಶಿ ಸಂಜಾತರ ಜನಸಂಖ್ಯೆ 2016ರಲ್ಲಿ 8 ಲಕ್ಷ ಹೆಚ್ಚಿದ್ದು, 2017ರ ಜುಲೈನಲ್ಲಿ ಒಟ್ಟು 4.45 ಕೊಟಿ ತಲುಪಿದೆ. ಒಂದು ವರ್ಷದಲ್ಲಿ ಶೇಕಡ 1.8ರಷ್ಟು ಹೆಚ್ಚಳವಾಗಿದೆ.

ವಲಸಿಗರ ನಾಡು ಎಂದೇ ಖ್ಯಾತವಾಗಿರುವ ಅಮೆರಿಕದಲ್ಲಿ ವಿದೇಶಿ ಸಂಜಾತರ ಪ್ರಮಾಣ ಒಂದು ಶತಮಾನದಲ್ಲೇ ಗರಿಷ್ಠ ಮಟ್ಟ ತಲುಪಿದೆ ಎಂದು ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್ (ಸಿಐಎಸ್) ಹೇಳಿದೆ.

"1980ರ ದಶಕದವರೆಗೂ ಪ್ರತಿ 16 ಮಂದಿಯ ಪೈಕಿ ಒಬ್ಬರು ಮಾತ್ರ ವಿದೇಶಿ ಸಂಜಾತರಿದ್ದರು" ಎಂದು ಸಿಐಎಸ್ ವರದಿ ಹೇಳಿದೆ. 2010ರಿಂದ 2017ರವರೆಗೆ ಭಾರತದಿಂದ ಗರಿಷ್ಠ ಅಂದರೆ 8.30 ಲಕ್ಷ ಮಂದಿ, ಚೀನಾದಿಂದ 6.77 ಲಕ್ಷ ಮಂದಿ ಹಾಗೂ ಡೊಮಿನಿಕ್ ರಿಪಬ್ಲಿಕ್‌ನಿಂದ 2.83 ಲಕ್ಷ ಮಂದಿ ಅಮೆರಿಕಕ್ಕೆ ಬಂದು ನೆಲೆಸಿದ್ದರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ದೇಶಗಳಿಂದ ಅಮೆರಿಕಕ್ಕೆ ಬಂದು ನೆಲೆಸುವವರ ಸಂಖ್ಯೆ ಕ್ರಮವಾಗಿ ಶೇಕಡ 47, ಶೇಕಡ 31 ಹಾಗೂ ಶೇಕಡ 32ರಷ್ಟು ಹೆಚ್ಚಿದೆ. ನೇಪಾಳದಿಂದ ಆಗಮಿಸುವವರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿದ್ದು, ನೇಪಾಳದಿಂದ ಆಗಮಿಸಿದವರ ಸಂಖ್ಯೆ 2010ಕ್ಕೆ ಹೋಲಿಸಿದರೆ ಶೇಕಡ 120ರಷ್ಟು ಹೆಚ್ಚಳವಾಗಿದೆ. 1.52 ಲಕ್ಷ ಮಂದಿ ನೇಪಾಳಿಗಳು ಅಮೆರಿಕದಲ್ಲಿದ್ದಾರೆ. ಪಾಕಿಸ್ತಾನ ಮೂಲದ ನಾಲ್ಕು ಲಕ್ಷ ಮಂದಿ ಅಮೆರಿಕದಲ್ಲಿದ್ದು, ಇವರ ಹೆಚ್ಚಳ ಪ್ರಮಾಣ ಶೇಕಡ 31 ಎಂದು ಸಿಐಎಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News