ಮಲಯಾಳಂ ನಟ ಕ್ಯಾಪ್ಟನ್ ರಾಜು ನಿಧನ

Update: 2018-09-17 05:18 GMT

ಕೊಚ್ಚಿ, ಸೆ.17: ಮಲಯಾಳಂನ  ಖ್ಯಾತ ನಟ ಕ್ಯಾಪ್ಟನ್ ರಾಜು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. 68 ವರ್ಷ ವಯಸ್ಸಿನ ನಟ ಕೊಚ್ಚಿಯಲ್ಲಿ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಜುಲೈನಲ್ಲಿ ಮಗನ ಮದುವೆ ಸಮಾರಂಭಕ್ಕೆ ಪಾಲ್ಗೊಳ್ಳಲು ಅಮೆರಿಕಕ್ಕೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆಯೇ ರಾಜು ಅವರಿಗೆ ಪಾರ್ಶ್ವವಾಯು ಬಾಧಿಸಿ ಪ್ರಜ್ಞಾಹೀನರಾಗಿದ್ದರು. ರಾಜು ಅವರ ಪರಿಸ್ಥಿತಿಯನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ವಿಮಾನದ ದಿಕ್ಕನ್ನು ಬದಲಿಸಿ ಮಸ್ಕತ್‌ನಲ್ಲಿ ಇಳಿಸಿದ್ದರು. ಕುಟುಂಬದವರ ಕೋರಿಕೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಟನನ್ನು ಮಸ್ಕತ್‌ನಿಂದ ಕೊಚ್ಚಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿತ್ತು.

ಕ್ಯಾಪ್ಟನ್ ರಾಜು 1981ರಲ್ಲಿ ಭಾರತೀಯ ಸೇನೆಯನ್ನು ತ್ಯಜಿಸಿ ನಟನಾ ವೃತ್ತಿಯನ್ನು ಆರಂಭಿಸಿದ್ದರು. 4 ದಶಕಗಳ ವೃತ್ತಿಜೀವನದಲ್ಲಿ ಇವರು ಮಲಯಾಳಂ, ತಮಿಳು, ತೆಲುಗು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಸಹಿತ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, 2017ರಲ್ಲಿ ‘ಮಾಸ್ಟರ್‌ಪೀಸ್’ ಎಂಬ ಚಿತ್ರದಲ್ಲಿ ಕೊನೆಯ ಬಾರಿ ನಟಿಸಿದ್ದರು. ಧಾರಾವಾಹಿಗಳಲ್ಲೂ ನಟಿಸಿದ್ದ ಅವರು ಕೆಲವು ಸಿನಿಮಾಗಳ ನಿರ್ದೇಶನವನ್ನು ಮಾಡಿದ್ದಾರೆ.
ಮೃತ ನಟ ರಾಜು ಅವರು ಪತ್ನಿ ಪ್ರಮೀಳಾ ಹಾಗೂ ಪುತ್ರ ರವಿ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News