ರಾಜ್ಯದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ 2 ರೂ. ಇಳಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ

Update: 2018-09-17 12:47 GMT

ಬೆಂಗಳೂರು, ಸೆ.17: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯು ಕ್ರಮವಾಗಿ 84.80 ರೂ. ಮತ್ತು 76.21 ರೂ.ಗಳಿದ್ದು, ಇತ್ತೀಚೆಗೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಗಣಿಸಿ ರಾಜ್ಯ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಿ, ಅಧಿಸೂಚನೆಯನ್ನು ಹೊರಡಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮಾರಾಟ ತೆರಿಗೆಯು ಕ್ರಮವಾಗಿ ಶೇ.21 ಮತ್ತು ಶೇ.21ರಷ್ಟಿದ್ದು, ಸರಕಾರವು ಇದನ್ನು ಕ್ರಮವಾಗಿ ಶೇ.3.25 ಹಾಗೂ ಶೇ.3.27ರಷ್ಟು ಇಳಿಕೆ ಮಾಡಿದೆ. ಆದುದರಿಂದ, ಸೆ.18ರಿಂದ ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲಿನ ಮಾರಾಟ ತೆರಿಗೆಯು ಕ್ರಮವಾಗಿ ಶೇ.28.75 ಮತ್ತು ಶೇ.17.73ರಷ್ಟು ಆಗಲಿದೆ.

ಇದರಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯಲ್ಲಿ 2 ರೂ.ಗಳಷ್ಟು ಇಳಿಕೆಯಾಗಲಿದ್ದು, ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕ್ರಮವಾಗಿ ಪ್ರಸಕ್ತ ವಿತರಣಾ ಬಲೆಯ ಆಧಾರದ ಮೇಲೆ 82.80 ರೂ. ಮತ್ತು 74.21ರೂ. ಆಗಲಿದೆ. ಈ ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರು ಸೆ.18ರಿಂದ ಪಡೆಯಲಿದ್ದಾರೆ.

ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯು ಬೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಕಡಿಮೆ ಇದ್ದು, ಅದಾಗ್ಯೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರಕಾರವು ತೆರಿಗೆ ದರದ ಇಳಿಕೆಯ ಮೂಲಕ ಗ್ರಾಹಕರಿಗೆ ದರ ಏರಿಕೆಯ ಹೊರೆಯನ್ನು ತಗ್ಗಿಸಿದೆ.

ಹೊಸೂರು(ತಮಿಳುನಾಡು)ನಲ್ಲಿ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 86.98 ರೂ., ಡೀಸೆಲ್ ದರವು 79.58 ರೂ., ಕಾಸರಗೋಡು(ಕೇರಳ)-ಪೆಟ್ರೋಲ್ 84.93 ರೂ., ಡೀಸೆಲ್ 78.53 ರೂ., ಅನಂತಪುರ(ಆಂಧ್ರಪ್ರದೇಶ)-86.47 ರೂ., 79.37 ರೂ. ಹಾಗೂ ಕಾಗಲ್(ಮಹಾರಾಷ್ಟ್ರ) ಪೆಟ್ರೋಲ್ 89.71 ರೂ.ಹಾಗೂ ಡೀಸೆಲ್ ದರವು 77.40 ರೂಗಳಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಕಲಬುರಗಿ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ಎರಡು ರೂ.ಕಡಿತಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಒಂದಷ್ಟು ಭಾರವನ್ನಾದರೂ ಇಳಿಸಬೇಕೆಂಬ ಉದ್ದೇಶದಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕನಿಷ್ಟ 2 ರೂ.ಸೆಸ್ ತೆರಿಗೆ ಕಡಿತಗೊಳಿಸಲಾಗುವುದು. ಇದು ರಾಜ್ಯದ ಜನತೆಗೆ ವಿಮೋಚನಾ ದಿನದ ಕೊಡುಗೆಯಾಗಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News