ಗಣೇಶ ವಿಗ್ರಹ ವಿಸರ್ಜನೆಯ ವೇಳೆ ದುರಂತ: ವಿದ್ಯುತ್ ಆಘಾತಕ್ಕೆ ಓರ್ವ ಬಲಿ

Update: 2018-09-17 05:51 GMT

ತುಮಕೂರು, ಸೆ.17: ಚೌತಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶನ ವಿಗ್ರಹದ ವಿಸರ್ಜನೆಯ ಸಂದರ್ಭ ಟ್ರಾಕ್ಟರ್‌ಗೆ ವಿದ್ಯುತ್ ತಗುಲಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಾ ತಾಲೂಕಿನ ಕೊಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮ ನಿವಾಸಿ ಸುರೇಶ್(42) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೋರ್ವ ಗಂಭೀರ ಗಾಯಗೊಂಡಿರುವುದು ವರದಿಯಾಗಿದೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿ ಗ್ರಾಮದಲ್ಲಿ ರವಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಗಣೇಶ ವಿಗ್ರಹದ ವಿಸರ್ಜನೆ ತೆರಳುತ್ತಿದ್ದ ವೇಳೆ ಕೆರೆ ಏರಿ ಬಳಿ ಆಕಸ್ಮಿಕವಾಗಿ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿದೆ. ಇದರಿಂದ ಸುರೇಶ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿರುವ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 ಈ ಬಗ್ಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News