ಹಾರ್ದಿಕ್ ಉಪವಾಸ ಅಂತ್ಯಗೊಳಿಸಲು ನೀರು ನೀಡಿದವರು ಯಾರು? ಗುಜರಾತ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ!

Update: 2018-09-17 07:10 GMT

ಗಾಂಧಿ ನಗರ, ಸೆ.17: ಗುಜರಾತ್ ರಾಜ್ಯದ ಗಾಂಧಿ ನಗರದಲ್ಲಿ ಗುಮಾಸ್ತ ಹುದ್ದೆಗಳಿಗೆ ನೇಮಕಾತಿಗಾಗಿ ರವಿವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿಗಳಿಗೆ ಪಟಿದಾರ್ ಆಂದೋಲನ ನಾಯಕ ಹಾರ್ದಿಕ್ ಪಟೇಲ್ ಕುರಿತಾದ ಪ್ರಶ್ನೆಯೊಂದು ಕೂಡ ಇತ್ತು.

ಹಾರ್ದಿಕ್ ಇತ್ತೀಚೆಗೆ ತಮ್ಮ ಸಮುದಾಯಕ್ಕೆ ಮೀಸಲಾತಿ ಹಾಗೂ ರೈತರ ಸಾಲ ಮನ್ನಾ ಆಗ್ರಹಿಸಿ 19 ದಿನಗಳ ತನಕ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಬಗ್ಗೆ ರವಿವಾರದ ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸಿ ವಿಭಾಗದಲ್ಲಿ - ಇತ್ತೀಚೆಗೆ ಉಪವಾಸ ಕುಳಿತಿದ್ದ ಹಾರ್ದಿಕ್ ಪಟೇಲ್ ಉಪವಾಸ ಅಂತ್ಯಗೊಳಿಸಲು ಯಾವ ರಾಜಕೀಯ ನಾಯಕ ನೀರು ನೀಡಿದರು ?’’ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗಾಗಿ ನೀಡಲಾದ ನಾಲ್ಕು ಆಯ್ಕೆಗಳಲ್ಲಿ ಶರದ್ ಯಾದವ್, ಶತ್ರುಘ್ನ ಸಿನ್ಹ, ಲಾಲು ಪ್ರಸಾದ್ ಯಾದವ್ ಹಾಗೂ ವಿಜಯ್ ರೂಪಾನಿ ಹೆಸರುಗಳಿದ್ದವು. ಸರಿಯಾದ ಉತ್ತರ ಶರದ್ ಯಾದವ್ ಆಗಿತ್ತು.

ಹಾರ್ದಿಕ್ ಉಪವಾಸ ಆರಂಭಿಸಿ 15 ದಿನಗಳಾದ ನಂತರ ಜೆಡಿಯು ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರಿಗೆ ಆಸ್ಪತ್ರೆಯಲ್ಲಿ ನೀರು ನೀಡುವ ಮೂಲಕ ಉಪವಾಸಕ್ಕೆ ಅಂತ್ಯ ಹಾಡಿದ್ದರು. ಆಗಸ್ಟ್ 25ರಂದು ಹಾರ್ದಿಕ್ ಉಪವಾಸ ಆರಂಭಿಸಿದ್ದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ಹಾರ್ದಿಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News