ರೂ. 6.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಸಿಎಂ ಆದಿತ್ಯನಾಥ್ ಅವರ ಗೋರಖನಾಥ ದೇವಳ

Update: 2018-09-17 10:56 GMT

ಲಕ್ನೋ,ಸೆ.17 : ಬಹಳ ಶೀಘ್ರದಲ್ಲಿಯೇ ಗೋರಖಪುರ ನಿವಾಸಿಗಳು ಅಲ್ಲಿನ ಖ್ಯಾತ ಗೋರಖನಾಥ ದೇವಾಲಯದಲ್ಲಿ ವಿಶ್ವ ದರ್ಜೆಯ ಜಲ ಮತ್ತು ಲೇಸರ್ ಶೋ ವೀಕ್ಷಿಸಬಹುದಾಗಿದೆ. ಮುಖ್ಯಮಂತ್ರಿ  ಆದಿತ್ಯನಾಥ್ ಅವರು ಮಹಂತ್ ಅಥವಾ ಮುಖ್ಯಸ್ಥರಾಗಿರುವ ಖ್ಯಾತ ಗೋರಖನಾಥ ಮಠದ ನವೀಕರಣ ಹಾಗೂ ಸುಂದರೀಕರಣ ಕಾರ್ಯವನ್ನು  ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರಕಾರದ ಸಹಯೋಗದೊಂದಿಗೆ ರೂ. 6.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ.

ದೇವಳದ ಪ್ರಾಂಗಣದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಧ್ವನಿ, ಬೆಳಕು ಮತ್ತು ಲೇಸರ್ ಶೋ ಆಯೋಜಿಸಲಾಗುವುದು. ಪೌರಾಣಿಕ ಕಥಾ ವಿವರಗಳನ್ನೂ ಇಲ್ಲಿ ಸಂದರ್ಶಕರಿಗೆ ವಿವರಿಸುವ ಏರ್ಪಾಟು ಮಾಡಲಾಗುವುದು. ಈ ಕೆರೆಯ ಅಭಿವೃದ್ಧಿಗಾಗಿ ಫ್ರಾನ್ಸ್ ದೇಶದ ಇಂಜಿನಿಯರುಗಳು ಹಾಗೂ ವಿಶೇಷ ಪರಿಕರಗಳನ್ನು  ತರಿಸಲಾಗುತ್ತಿದೆ.

ಇಡೀ ದೇವಳವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದಲ್ಲದೆ ಕಟ್ಟಡದ ಮೇಲಿನಿಂದ ವಿಮಾನಗಳು ಹಾರುವಾಗಲೂ ಈ ಬೆಳಕು ಗೋಚರಿಸುವಮತೆ ಮಾಡಲಾಗುವುದು.

ಈ  ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಉದ್ದೇಶದಿಂದ ಇಂಜಿನಿಯರುಗಳು ರಾತ್ರಿ ಹಗಲು ಶ್ರಮಿಸುತ್ತಿದ್ದು ಮುಂದಿನ ತಿಂಗಳು ಕಾಮಗಾರಿಯನ್ನು ಮುಗಿಸುವ ಸಾಧ್ಯತೆಯಿದೆ.

ಆದರೆ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ದೀಪಕ್ ಸಿಂಗ್ ಅವರು ಈ ಯೋಜನೆಯ ಬಗ್ಗೆ ಅಸಮಾಧಾನ ಹೊಂದಿದ್ದು, ಆದಿತ್ಯನಾಥ್ ಅವರು ಸಾರ್ವಜನಿಕ ಹಣವನ್ನು ತಮ್ಮ ಸ್ವಹಿತಾಸಕ್ತಿಗಾಗಿ ದುರುಪಯೋಗ ಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News