ಜಾಲತಾಣಗಳಲ್ಲಿ ಖಾಸಗಿ ಸಂಗತಿ ಬಿಚ್ಚಿಡುವುದರಿಂದ ಸೈಬರ್ ಅಪರಾಧಗಳು ಹೆಚ್ಚು: ಎಸ್ಪಿ ಅಣ್ಣಾಮಲೈ

Update: 2018-09-17 13:44 GMT

ಚಿಕ್ಕಮಗಳೂರು, ಸೆ.17: ಅಂತರ್ಜಾಲದ ಮಾಯಾಜಾಲದಲ್ಲಿ ಖಾಸಗಿ ಸಂಗತಿಗಳನ್ನೆಲ್ಲ ತೆರೆದಿಡುತ್ತಿರುವುದರಿಂದ ಸೈಬರ್ ಅಪರಾಧಗಳು ಅಧಿಕಗೊಳ್ಳುತ್ತಿವೆ. ಕಂಪ್ಯೂಟರ್‍ನಲ್ಲಿ ಅಥವಾ ಕಂಪ್ಯೂಟರ್ ಆಧರಿತವಾಗಿ ನಡೆಯುವ ಅಪರಾಧಗಳನ್ನು ಸೈಬರ್ ಕ್ರೈಂ ಎಂದು ಕರೆಯಲಾಗುತ್ತದೆ. ಅಂತರ್ಜಾಲ ಇಲ್ಲದೆ ಬದುಕಿಲ್ಲ ಎಂಬ ಹಂತ ತಲುಪಿದ್ದೇವೆ. ನಮಗರಿಯದೇ ನಮ್ಮೆಲ್ಲ ಗುಣಸ್ವಭಾವಗಳನ್ನು ಬಿಚ್ಚಿಡುತ್ತಿರುವುದರಿಂದ ಸೈಬರ್ ಅಪರಾಧಿಗಳಿಗೆ ಸಹಕಾರಿಯಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ವಿಶ್ಲೇಷಿಸಿದ್ದಾರೆ.

ಐಡಿಎಸ್‍ಜಿ ಸರಕಾರಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಸೈಬರ್ ಅಪರಾಧ-ಇತ್ತೀಚಿನ ಮಾದರಿ ಮತ್ತು ಸವಾಲುಗಳು' ಕುರಿತಂತೆ ಉಪನ್ಯಾಸ ನೀಡಿ ಪವರ್ ಪಾಯಿಂಟ್‍ನೊಂದಿಗೆ ಸಂವಾದಿಸಿದ ಅವರು, ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಕಂಪ್ಯೂಟರ್-ಮೊಬೈಲ್-ಅಂತರ್ಜಾಲ-ಟ್ವಿಟರ್-ಫೇಸ್‍ಬುಕ್-ವಾಟ್ಸ್ ಅಪ್ ವ್ಯಾಪಕವಾಗಿ ಅಗತ್ಯಕ್ಕಿಂತ ಅತ್ಯಧಿಕವಾಗಿ ಬಳಕೆಯಾಗುತ್ತಿದೆ. ಆಚಾರ-ವಿಚಾರಗಳು, ಗುಣ-ಸ್ವಭಾವಗಳು, ಆಸಕ್ತಿ, ವಸ್ತ್ರವಿನ್ಯಾಸ, ಭಾವಚಿತ್ರ ಸೇರಿದಂತೆ ನಮ್ಮೆಲ್ಲ ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳುವ ಅಭ್ಯಾಸ ರೂಢಿಗತಗೊಂಡಿದೆ. ಇದರ ಪರಿಣಾಮಗಳ ಎಚ್ಚರಿಕೆ ವಹಿಸುತ್ತಿಲ್ಲ. ಜಾಹಿರಾತು ನೀಡುವ ತಾರೆಗಳಿಗೆ, ರಾಜಕೀಯ ಮುಖಂಡರಿಗೆ ಹೊರತುಪಡಿಸಿದರೆ ಸಾಮಾನ್ಯ ಜನ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ನಮ್ಮ ವರ್ತನೆಯಿಂದ ಯಾವುದೋ ಸಂಸ್ಥೆ ಅಥವಾ ವ್ಯಕ್ತಿಗಳು ವಾಣಿಜ್ಯ ಕಾರಣಗಳಿಗಾಗಿ ನಮ್ಮ ಮೇಲೆ ಪ್ರಭಾವ ಬೀರಲು ಇದು ಸಹಕಾರಿಯಾಗುತ್ತದೆ ಎಂದರು.

ಯುವಜನರಿಗೆ ಅಂತರ್ಜಾಲ ಅತ್ಯಾಸಕ್ತಿಯ ಫಲವಾಗಿ ಸೈಬರ್ ಅಪರಾಧಿಗಳಿಗೆ ಸಹಾಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದರ ಪರಿಣಾಮ ವ್ಯಕ್ತಿತ್ವವೇ ನಿಧಾನವಾಗಿ ಬದಲಾಗುತ್ತದೆ ಎಂದರು.  

ಸೈಬರ್ ಅಪರಾಧದಲ್ಲಿ ಊಹಿಸಲಾಗದ ಅತ್ಯಧಿಕ ಲಾಭ ಇರುವುದರಿಂದ ಚಾಣಾಕ್ಷ ಬುದ್ಧಿವಂತರು ಚಾಲಾಕಿತನ ತೋರುತ್ತಾರೆ. ಇಲ್ಲಿ ಪರಿಣಾಮವೂ ಜಾಗತೀಕ ಮಟ್ಟದಲ್ಲಿರುತ್ತದೆ. ದೈಹಿಕವಾಗಿ ಅಪರಾಧಿಗಳು ಸ್ಥಳದಲ್ಲಿ ಇಲ್ಲದಿರುವುದರಿಂದ ಪತ್ತೆ ಹಚ್ಚುವುದು ತುಂಬಾ ಕಷ್ಟ ಎಂದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ, ಬಹುತೇಕ ವ್ಯಕ್ತಿಗಳ ತಂತ್ರಾಂಶಗಳು ಹ್ಯಾಕ್ ಆಗಿರುತ್ತವೆ. ಒಂದು ಮೂಲದ ಪ್ರಕಾರ ಭಾರತೀಯ ಸೇನೆ, ಬಹುತೇಕ ಬ್ಯಾಂಕ್‍ಗಳು, ಸಿಬಿಐ, ಟಿಆರ್‍ಎಐ, ಇಸ್ರೋ, ಆಧಾರ್ ಅಷ್ಟೇ ಅಲ್ಲ ನೊಂದಾವಣೆ ಮಾಡಿಕೊಳ್ಳುವ ಐಆರ್‍ಐಎನ್‍ಎನ್ ಖಾತೆಗಳು ಹ್ಯಾಕ್ ಆಗಿವೆ ಎಂದರು.  

ವಾಯುಸೇನೆಯ ವಿಮಾನ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ವಿಮಾನ ಚಾಲಕರು ಅರ್ಧರಾತ್ರಿಯವರೆಗೂ ಅಂತರ್ಜಾಲದಲ್ಲಿ ಕಾಲ ಕಳೆಯುತ್ತಿರುವುದು ಪ್ರಮುಖ ಕಾರಣಗಳಲ್ಲೊಂದು ಎಂದು ಭಾರತೀಯ ವಾಯುಸೇನೆಯ ಮುಖಸ್ಥರೆ ಹೇಳಿರುವುದನ್ನು ಉಲ್ಲೇಖಿಸಿದ ಅಣ್ಣಾಮಲೈ,  ಕರ್ನಾಟಕದ ವಿದ್ಯುಚ್ಛಕ್ತಿಯ ಪೂರೈಕೆ ಮತ್ತು ವಿತರಣೆಯ ಜಾಲ ಸಂಪೂರ್ಣವಾಗಿ ಉಪಗ್ರಹ ನಿಯಂತ್ರಣಕ್ಕೊಳಪಟ್ಟಿದೆ. ನಮ್ಮ ನಿತ್ಯಜೀವನ ಬಹುತೇಕ ರಿಮೋಟ್ ಕಂಟ್ರೋಲರ್‍ನಿಂದ ನಿಯಂತ್ರಿಸಲ್ಪಡುತ್ತಿದೆ ಎಂದರು.

ಅಂತರ್ಜಾಲದ ಮೂಲಕ ವ್ಯವಹರಿಸುವ ಬಿಟ್‍ಕಾಯಿನ್ ಹೊಸ ತಾಂತ್ರಿಕತೆಯ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವಾಗಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಚಲಾವಣೆಯಲ್ಲಿದ್ದು ದುರುದ್ದೇಶದ ಮಾಹಿತಿ ಕಳವಿಗೆ ಇವು ಬಳಕೆಯಾಗುತ್ತಿವೆ. ಭಾರತದಲ್ಲಿ ಬಿಟ್ ಕಾಯಿನ್‍ಗೆ ಅನುಮತಿ ಇಲ್ಲ. ಬ್ರಿಟನ್,ಯೂರೋಪ್ ಮತ್ತು ಅಮೇರಿಕಾ ದೇಶಗಳಲ್ಲಿ ಈ ಅಪರಾಧಗಳು ವ್ಯಾಪಕವಾಗಿವೆ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದೇಶ-ದೇಶಗಳ ನಡುವೆ ಯುದ್ಧಗಳು ದುಬಾರಿಯಗಿರುವ ಈ ಸಂದರ್ಭದಲ್ಲಿ ಸೈಬರ್ ಅಪರಾಧದ ಮೂಲಕ ಇನ್ನೊಂದು ದೇಶವನ್ನು ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ ಎಂದರು.

2000ದಿಂದ ಸೈಬರ್ ಅಪರಾಧ ತಡೆ ಕಾನೂನು ಜಾರಿಯಲ್ಲಿದ್ದರೂ ಇತ್ತೀಚಿಗಷ್ಟೇ ಕರ್ನಾಟಕದ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.  2013ರಲ್ಲಿ 5,500 ಸೈಬರ್ ಪ್ರಕರಣ ದಾಖಲಾಗಿದ್ದರೆ ಪ್ರಸಕ್ತ ಸಾಲಿನಲ್ಲಿ ಸುಮಾರು 18,000 ಪ್ರಕರಣಗಳು ದಾಖಲಾಗಿವೆ. ಅಪರಾಧಗಳಲ್ಲಿ ಶೇ.1ರಷ್ಟು ಮಾತ್ರ  ದಾಖಲಾಗುತ್ತಿವೆ. ಸೈಬರ್ ಅಪರಾಧ ಆರ್ಥಿಕವಾಗಿ ಅಷ್ಟೇ ಅಲ್ಲ ಉನ್ನತವ್ಯಕ್ತಿಗಳ ಚಾರಿತ್ರ್ಯಹರಣ, ವ್ಯಕ್ತಿತ್ವಕ್ಕೆ ಮಸಿಬಳಿಯುವ ಸಂದರ್ಭಗಳೂ ಇವೆ. ಹಲವು ದೂರುಗಳಲ್ಲಿ ಕಳೆದುಕೊಂಡಿದ್ದನ್ನು ಹಿಂದೆ ಪಡೆಯುವುದು ಅಸಾಧ್ಯವಾಗುತ್ತದೆ. ಅಪರಾಧ ಕಂಡುಹಿಡಿಯಲು ದೀರ್ಘ ಅವಧಿ ಜೊತೆಗೆ ನಷ್ಟವಾದದ್ದಕ್ಕಿಂತ ಅಧಿಕ ಮೊತ್ತ ವ್ಯಯವಾಗುತ್ತದೆ. ಈ ಹಿನ್ನಲೆಯಲ್ಲಿ ಅಪರಾಧ ತಡೆಗಟ್ಟುವ ಮುಂದಾಲೋಚನೆ ಒಳ್ಳೆಯದು ಎಂದರು. ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜ್ಪಅಧ್ಯಕ್ಷತೆ ವಹಿಸಿದ್ದರು.   

ವಿಚಾರಸಂಕಿರಣದ ಸಂಯೋಜಕಿ ಡಾ.ಡಿ.ಎ.ಪ್ರತಿಮಾ ಮಥಾಯಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸೋಮಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಬಿಂದು ಪ್ರಾರ್ಥಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರೊ.ಗಣೇಶಾಚಾರ್ಯ ಸ್ವಾಗತಿಸಿ, ವಿಭಾಗದಮುಖ್ಯಸ್ಥ ಡಾ.ಎಸ್.ಇ.ನಟರಾಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News