ಸರ್ದಾರ್ ಪಟೇಲರ ದೃಢಸಂಕಲ್ಪದಿಂದ ಹೈದರಾಬಾದ್ ಪ್ರಾಂತ್ಯಕ್ಕೆ ವಿಮೋಚನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-17 14:41 GMT

ಕಲಬುರಗಿ, ಸೆ.17: ಪ್ರಧಾನಿ ಜವಾಹರ್‌ಲಾಲ್ ನೆಹರು ಹಾಗೂ ಅವರ ಸಂಪುಟದ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ದೃಢಸಂಕಲ್ಪ, ದಿಟ್ಟ ಕ್ರಮದ ಫಲವಾಗಿ ಹೈದರಾಬಾದ್ ಪ್ರಾಂತ್ಯಕ್ಕೆ ಸ್ವಾತಂತ್ರದ ಸವಿ ದೊರಕುವಂತಾಯಿತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸೋಮವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ಈ ಮಹಾನ್ ಚೇತನಕ್ಕೆ ಆದರಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ಹಾಗೂ ಈ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ಹೋರಾಟಗಾರರಿಗೂ ಹೃತ್ಪೂರ್ವಕ ಗೌರವ ಅರ್ಪಿಸುತ್ತೇನೆ ಎಂದರು.

ಹೈದರಾಬಾದ್ ನಿಝಾಮ ಉಸ್ಮಾನ್ ಅಲಿಖಾನ್ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಲು ನಿರಾಕರಿಸಿದ್ದರು. ಅಷ್ಟರೊಳಗಾಗಲೇ ರಝಾಕರ ದೌರ್ಜನ್ಯದಿಂದ ರೋಸಿ ಹೋಗಿದ್ದ ಅಂದಿನ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳ ಜನತೆ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಟಕ್ಕೆ ಅಣಿಯಾದದ್ದನ್ನು ಅವರು ಸ್ಮರಿಸಿದರು.

ರಝಾಕರ ದೌರ್ಜನ್ಯದ ಸುದ್ದಿ ತಿಳಿದ ಪ್ರಧಾನಿ ಜವಾಹರ್‌ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ನಿಝಾಮನ ವಿರುದ್ಧ ಪೊಲೀಸ್ ಕಾರ್ಯಾಚರಣೆಗೆ ನಿರ್ಧಾರ ಮಾಡಿ ಅಮಾಯಕ ಜನರ ಜೀವ ರಕ್ಷಣೆಗೆ ಮುಂದಾದರು ಎಂದು ಕುಮಾರಸ್ವಾಮಿ ತಿಳಿಸಿದರು.

ಅದರ ಪರಿಣಾಮವಾಗಿ 1948ರ ಸೆ.13ರಂದು ಸೋಲಾಪುರ ಸೇರಿದಂತೆ ಐದು ಕಡೆಯಿಂದ ಮೇಜರ್ ಜನರಲ್ ಜೆ.ಎನ್.ಚೌಧರಿ ನೇತೃತ್ವದಲ್ಲಿ ನಿಝಾಮನ ವಿರುದ್ಧ ‘ಆಪರೇಷನ್ ಪೋಲೋ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಯಿತು. ಮೊದ ಮೊದಲು ಪ್ರತಿರೋಧ ತೋರಿದ್ದ ನಿಝಾಮನ ರಝಾಕ ಪಡೆ ಮೂರು ದಿನಗಳ ನಂತರ ಸೋತು ಸುಣ್ಣವಾಯಿತು. ಸೆ.17ರಂದು ನಿಝಾಮನು ಶರಣಾಗಿ ಹೈದರಾಬಾದ್ ಪ್ರಾಂತ್ರವನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಅವರು ಹೇಳಿದರು.

ಹೈದರಾಬಾದ್ ಕರ್ನಾಟಕ ಭಾಗ ಭಾರತದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಸತತ ಬರಗಾಲಗಳ ಕಾರಣ ಇಲ್ಲಿ ಅಭಿವೃದ್ಧಿ ಮರಿಚಿಕೆಯಾಗಿತ್ತು. ಡಾ.ನಂಜುಂಡಪ್ಪ ವರದಿಯ ಪ್ರಕಾರ ಅಂದು ಈ ಭಾಗದಲ್ಲಿದ್ದ 31 ತಾಲೂಕುಗಳಲ್ಲಿ 28 ತಾಲೂಕುಗಳು ಹಿಂದುಳಿದಿದ್ದವು. ಈ ಹಿನ್ನೆಲೆಯಲ್ಲಿ ಹೈದರಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂಬ ಮತ್ತೊಂದು ಹೋರಾಟ ಪ್ರಾರಂಭವಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು.

ದಶಕಗಳ ಹೋರಾಟ, ಹಿರಿಯರಾದ ವೈಜನಾಥ ಪಾಟೀಲ್, ಈ ಭಾಗದ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಧರಂಸಿಂಗ್ ಮತ್ತಿತರ ನಾಯಕರ ಸತತ ಹೋರಾಟ, ಪ್ರಯತ್ನಗಳ ಫಲವಾಗಿ 2012ರ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರವು ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು(ಜೆ) ಪರಿಚ್ಛೇದ ಸೇರಿಸುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅವಕಾಶ ಕಲ್ಪಿಸಲಾಯಿತು ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಹಾಗೂ ಕೇಂದ್ರ ಸರಕಾರಕ್ಕೆ ಸಂವಿಧಾನ ತಿದ್ದುಪಡಿಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಮಾಡಿದ ಪ್ರಯತ್ನವನ್ನು ನಾವು ಇಲ್ಲಿ ಸ್ಮರಿಸಲೇಬೇಕು. ಇದರಿಂದಾಗಿ ಈ ಭಾಗದ 20 ಸಾವಿರಕ್ಕೂ ಅಧಿಕ ವಿದ್ಯಾವಂತ ಯುವಕ, ಯುವತಿಯರಿಗೆ ಸರಕಾರಿ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ದೊರೆಯುವಂತಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಆದರೆ, ಹೈದರಾಬಾದ್ ಕರ್ನಾಟಕ ಮೀಸಲಾತಿ ಕುರಿತು ಕೆಲವು ಇಲಾಖೆಗಳಲ್ಲಿರುವ ಗೊಂದಲಗಳು ನನ್ನ ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಈ ಭಾಗದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಈ ಮೀಸಲಾತಿಯಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈವರೆಗೆ 2880 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, 2411.41 ಕೋಟಿ ರೂ.ವೆಚ್ಚವಾಗಿದೆ. ಈ ಯೋಜನೆಯಡಿ ಮಂಜೂರಾಗಿರುವ 13,691 ಕಾಮಗಾರಿಗಳಲ್ಲಿ 8146 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News