ಮಡಿಕೇರಿ: ಅವೈಜ್ಞಾನಿಕ ಕಸ ವಿಲೇವಾರಿ; ವಿವಿಧ ಬಡಾವಣೆಗಳಲ್ಲಿ ನೊಣಗಳದ್ದೇ ಕಾಟ

Update: 2018-09-17 18:13 GMT

ಮಡಿಕೇರಿ, ಸೆ.17: ಮಡಿಕೇರಿ ನಗರಸಭೆಯು ನಗರವನ್ನು ಕಸಮುಕ್ತ ನಗರವನ್ನಾಗಿ ಮಾಡುವ ಗುರಿ ಯನ್ನು ಮುಟ್ಟುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆಯಾದರೂ ನಗರದೆಲ್ಲೆಡೆಯಿಂದ ಸಂಗ್ರಹಿಸಿದ ಕಸದ ರಾಶಿಯನ್ನು ವಿಲೇವಾರಿ ಮಾಡುತ್ತಿರುವ ರೀತಿ ಮಾತ್ರ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಟ್ಟ ಪ್ರದೇಶದ ಸ್ಟೋನ್ ಹಿಲ್ ಬಳಿ ಪ್ರತಿ ದಿನ ರಾಶಿಗಟ್ಟಲೆ ಕಸವನ್ನು ಸುರಿಯಲಾಗುತ್ತಿದೆ. ಎತ್ತರದ ಪ್ರದೇಶದಲ್ಲಿ ಸುರಿಯಲ್ಪಡುವ ಕಸದ ರಾಶಿ ತಗ್ಗು ಪ್ರದೇಶವನ್ನು ವ್ಯಾಪಿಸುತ್ತಿದ್ದು, ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ದುರ್ವಾಸನೆ ಮತ್ತು ನೊಣಗಳ ಹಾವಳಿಯಿಂದ ಕಂಗೆಟ್ಟು ಹೋಗಿದ್ದಾರೆ. ಕಸ ವಿಲೇವಾರಿ ಶುಲ್ಕವನ್ನು ವಾಸದ ಮನೆಗೆ ರೂ.180 ಹಾಗೂ ವಾಣಿಜ್ಯ ಕಟ್ಟಡಕ್ಕೆ ರೂ.360ರ ಪ್ರಕಾರವಾಗಿ ಜನರು ತೆರಿಗೆ ಪಾವತಿಸುವ ಸಂದರ್ಭವೇ ನಗರಸಭೆ ಸಂಗ್ರಹಿಸುತ್ತಿದೆ. ಲಕ್ಷಗಟ್ಟಲೆ ಹಣ ಸ್ವಚ್ಛತೆಯ ಹೆಸರಿನಲ್ಲಿ ಸಂಗ್ರಹವಾಗುತ್ತಿದ್ದರೂ ಕಸ ವಿಲೇವಾರಿ ಮತ್ತು ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ.

ನಗರದ ತುಂಬಾ ಮನೆ ಮನೆ ಕಸ ಸಂಗ್ರಹವಾಗುತ್ತಿದೆ. ಕಸ ಸಂಗ್ರಹಿಸುವ ಸಂದರ್ಭ ಒಣ ಕಸ ಮತ್ತು ಹಸಿ ಕಸವೆಂದು ವಿಂಗಡಿಸಲಾಗುತ್ತದೆ. ಆದರೆ ಕಸದ ರಾಶಿ ತಂದು ಸುರಿಯುವ ಬೆಟ್ಟದ ಪ್ರದೇಶದಲ್ಲಿ ಎಲ್ಲಾ ಕಸವನ್ನು ಒಟ್ಟಾಗಿ ಹಾಕಲಾಗುತ್ತಿದೆ. ಕೊಳೆತು ನಾರುತ್ತಿರುವ ತ್ಯಾಜ್ಯ ತುಂಬಿದ ಪ್ರದೇಶದಲ್ಲಿ ನಾಯಿ, ನರಿಗಳು, ನೊಣ, ಸೊಳ್ಳೆಗಳ ಓಡಾಟ ಸಾಮಾನ್ಯವಾಗಿ ಬಿಟ್ಟಿದೆ. ತೆರೆದ ಪ್ರದೇಶದಲ್ಲಿ ಈ ರೀತಿ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗುತ್ತದೆ. ಈ ಕಾರಣದಿಂದ ವೈಜ್ಞ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ತ್ಯಾಜ್ಯವನ್ನು ಸಂಗ್ರಹಿಸುವುದು ಮತ್ತು ಇವುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವಂತೆ ಪೌರಾಡಳಿತ ಇಲಾಖೆ ಸುಮಾರು 5 ವರ್ಷಗಳ ಹಿಂದೆಯೇ ನಗರಸಭೆಗೆ ಸಲಹೆಯನ್ನು ನೀಡಿತ್ತು. ಆದರೆ ತರಾತುರಿಯಲ್ಲಿ ಯಂತ್ರ ಗಳನ್ನು ಖರೀದಿಸಿದ ನಗರಸಭೆ ಅವುಗಳನ್ನು ಕಸಕ್ಕಿಂತ ಕಡೆಯಾಗಿ ತ್ಯಾಜ್ಯಗಳನ್ನು ಸುರಿಯುವ ಪ್ರದೇಶದ ಶೆಡ್‌ನಲ್ಲಿರಿಸಿದೆ. ತ್ಯಾಜ್ಯ ವಿಲೇವಾರಿಗೆ ನಿಗದಿಪಡಿಸಿರುವ 6 ಎಕರೆ ಪ್ರದೇಶ ಬೆಟ್ಟದ ಮೇಲಿದ್ದು ಹಸಿ, ಒಣ ಕಸ ಬೇರ್ಪಡಿಸುವ ಈ ಘಟಕ ಕೆಲವೊಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಗೋಜಿಗೆ ನಗರಸಭೆ ಹೋಗಿಲ್ಲ. ಕೇವಲ ನಗರದಲ್ಲಿ ಸಂಗ್ರಹಿಸಿದ ಕಸದ ರಾಶಿಯನ್ನು ತಂದು ಸುರಿಯುವ ಕಾರ್ಯವಾಗುತ್ತಿದೆ ಹೊರತು ವೈಜ್ಞಾನಿಕ ಸ್ಪರ್ಷ ಇಲ್ಲಿ ಮರೀಚಿಕೆಯಾಗಿದೆ ಎಂಬುದು ನಾಗರಿಕರ ಅಂಬೋಣ.

ತ್ಯಾಜ್ಯವು ಜಲಮೂಲಗಳ ಶುಚಿತ್ವಕ್ಕೂ ಧಕ್ಕೆ ಉಂಟು ಮಾಡುತ್ತಿದೆ. ಆದರೆ ನಗರಸಭೆಯ ಆಡಳಿತ ಮಂಡಳಿಯಾಗಲಿ, ಈ ಭಾಗದ ನಗರಸಭಾ ಸದಸ್ಯರಾಗಲಿ ಇಲ್ಲಿಯವರೆಗೆ ವೈಜ್ಞಾನಿಕ ವಿಧಾನದ ಮೂಲಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಮನೆ ಮನೆ ಕಸ ಸಂಗ್ರಹಿಸುವುದಷ್ಟೇ ಸ್ವಚ್ಛತೆ ಎಂದು ತಿಳಿದುಕೊಂಡಿರುವ ನಗರಸಭೆ ಸಂಗ್ರಹವಾದ ತ್ಯಾಜ್ಯದಿಂದ ಉಂಟಾಗುತ್ತಿರುವ ಅಶುಚಿತ್ವದ ವಾತಾವರಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ವೈಜ್ಞಾನಿಕ ರೂಪ ನೀಡುವಂತೆ ಒತ್ತಾಯಿಸಿದ್ದಾರೆ.

ಕಸದ ರಾಶಿಯಿಂದ ಬೆಟ್ಟ ಪ್ರದೇಶ ಮಲಿನವಾಗುತ್ತಿದೆ. ಇದನ್ನು ತಪ್ಪಿಸಿ ಮಂಜಿನ ನಗರಿಯ ನೈಜ ಸೊಬಗನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ನಾಗರಿಕರು ಅಭಿಪ್ರಾಯ ಪಡುತ್ತಾರೆ.

ನಾಲ್ಕು ವರ್ಷಗಳ ಸ್ವಚ್ಛತಾ ಅಭಿಯಾನದ ಪರಿಣಾಮ ದೇಶದ ಶೇ.40ರಿಂದ ಶೇ.90ರಷ್ಟು ಭಾಗ ಸ್ವಚ್ಛ ಪ್ರದೇಶವಾಗಿ ಮಾರ್ಪಟ್ಟಿದೆ ಎಂದು ಸರಕಾರದ ಅಂಕಿ ಅಂಶ ಹೇಳುತ್ತದೆ. ಆದರೆ ಕೇವಲ 33ರಿಂದ 34 ಸಾವಿರ ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ವಿಲೇವಾರಿಗೆ ವೈಜ್ಞ್ಞಾನಿಕ ಯೋಜನೆಯನ್ನು ಜಾರಿಗೆ ತರಲು ಇಂದಿಗೂ ಸಾಧ್ಯವಾಗಿಲ್ಲ. ನಗರಸಭಾ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಆತಂಕ ಸೃಷ್ಟಿಸುತ್ತಿರುವ ಅಶುಚಿತ್ವದ ವಾತಾವರಣ

ಕೊಳೆತು ನಾರುತ್ತಿರುವ ತ್ಯಾಜ್ಯ ಸಂಗ್ರಹದ ಪ್ರದೇಶದಲ್ಲೇ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಸಂಗ್ರಹಗಾರವಿದ್ದು, ಅಶುಚಿತ್ವದ ವಾತಾವರಣ ಆತಂಕವನ್ನು ಸೃಷ್ಟಿಸುತ್ತಲೇ ಇದೆ. ಸುಬ್ರಹ್ಮಣ್ಯ ನಗರ, ಪೊಲೀಸ್ ವಸತಿ ಗೃಹ ಸೇರಿದಂತೆ ತಗ್ಗು ಪ್ರದೇಶದ ಕೆಲವು ಬಡಾವಣೆಗಳು ನೊಣ ಆಕ್ರಮಿತ ಪ್ರದೇಶಗಳಾಗಿ ಮಾರ್ಪಟ್ಟಿವೆ. ಇಲ್ಲಿನ ನಿವಾಸಿಗಳು ಈ ಅವ್ಯವಸ್ಥೆಯ ಬಗ್ಗೆ ನಗರಸಭೆಯ ಗಮನ ಸೆಳೆಯುತ್ತಲೇ ಬಂದಿದ್ದಾರೆ, ಅಲ್ಲದೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಂತೂ ಕೊಳೆತು ನಾರುವ ಪ್ರದೇಶದಿಂದ ಹರಿಯುವ ನೀರು ತಗ್ಗು ಪ್ರದೇಶವನ್ನು ಆವರಿಸಿ ಅಸಹ್ಯವನ್ನು ಮೂಡಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News