ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಸಾಕ್ಷಿ ಮಲಿಕ್

Update: 2018-09-17 18:28 GMT

ಹೊಸದಿಲ್ಲಿ, ಸೆ.17: ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿರುವ ಭಾರತದ ಕುಸ್ತಿತಾರೆ ಸಾಕ್ಷಿ ಮಲಿಕ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 62 ಕೆಜಿ ತೂಕದ ಟ್ರಯಲ್ಸ್‌ನಲ್ಲಿ ಸಾಕ್ಷಿ ಎದುರಾಳಿ ಸರಿತಾ ಮೋರ್ ಸ್ಪರ್ದೆಯಿಂದ ಹಿಂದೆ ಸರಿದರು. ಹೀಗಾಗಿ ಸಾಕ್ಷಿ ಟ್ರಯಲ್ಸ್ ಎದುರಿಸದೇ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ 2018ರ ಋತುವಿನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಲಷ್ಟೇ ಶಕ್ತರಾಗಿರುವ ಸಾಕ್ಷಿ ಇತ್ತೀಚೆಗೆ ಇಂಡೋನೇಶ್ಯಾದಲ್ಲಿ ಕೊನೆಗೊಂಡ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಲು ವಿಫಲರಾಗಿದ್ದರು.

ಭಾರತದ ಕುಸ್ತಿ ಫೆಡರೇಶನ್(ಡಬ್ಲುಐಎಫ್)ಸುಶೀಲ್ ಕುಮಾರ್ ಹಾಗೂ ಸಾಕ್ಷಿ ಮಲಿಕ್ ಟ್ರಯಲ್ಸ್‌ಗೆ ಒಳಪಡಿಸಲು ಬಯಸಿತ್ತು. ಆದರೆ, ಸುಶೀಲ್ ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಟ್ರಯಲ್ಸ್ ನಿಂದ ಹೊರಗುಳಿದಿದ್ದರು. ‘‘ನಾಲ್ಕು ತೂಕ ವಿಭಾಗಗಳ ಟ್ರಯಲ್ಸ್ ಬಾಕಿ ಉಳಿದಿದೆ. ಈ ಪೈಕಿ ಬಜರಂಗ್ ಪೂನಿಯಾ(ಪುರುಷರ 65ಕೆಜಿ) ಹಾಗೂ ವಿನೇಶ್ ಪೋಗಟ್‌ರನ್ನು(ಮಹಿಳೆಯರ 50ಕೆಜಿ)ಟ್ರಯಲ್ಸ್ ಗೆ ಒಳಪಡಿಸುವುದಿಲ್ಲ. ಸಾಕ್ಷಿ ಅವರು ಸರಿತಾ ವಿರುದ್ಧ ಟ್ರಯಲ್ಸ್‌ನಲ್ಲಿ ಸೆಣಸಾಡಬೇಕಾಗಿತ್ತು. ಆದರೆ, ಅವರು ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಾಕ್ಷಿ ಅವರನ್ನು ವಿಶ್ವ ಚಾಂಪಿಯನ್‌ಶಿಪ್‌ಗೆ ಕಳುಹಿಸಿಕೊಡಲಿದ್ದೇವೆ’’ಎಂದು ಡಬ್ಲುಐಎಫ್ ಉಪ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ಬೆಲಾರಸ್‌ನಲ್ಲಿ ನಡೆದ ಯುಡಬ್ಲುಡಬ್ಲು ರ್ಯಾಂಕಿಂಗ್ ಸ್ಪರ್ಧೆಯಲ್ಲಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟಿದ್ದರು. ರವಿವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಅಜೆರ್‌ಬೈಜಾನ್‌ನ ಮರಿಯನ್ನಾ ಸಟ್ಸಿನ್ ವಿರುದ್ಧ 2-6 ಅಂತರದಿಂದ ಸೋತಿದ್ದರು.

ಅಕ್ಟೋಬರ್ 20ರಿಂದ 28ರ ತನಕ ಬುಡಾಪೆಸ್ಟ್ ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಸಾಕ್ಷಿ ಅವರ ಈ ಪ್ರದರ್ಶನ ಆತ್ಮವಿಶ್ವಾಸ ಹೆಚ್ಚಿಸಿದೆ.

ಮಹಿಳೆಯರ 53 ಕೆಜಿ ವಿಭಾಗದ ಟ್ರಯಲ್ಸ್ ಲಕ್ನೋದಲ್ಲಿ ಮಂಗಳವಾರ ನಡೆಯಲಿದೆ. ರಾಷ್ಟ್ರೀಯ ಮಹಿಳಾ ಕೋಚ್ ಕುಲ್‌ದೀಪ್ ಮಲಿಕ್ ಉಸ್ತುವಾರಿಯಲ್ಲಿ ರಿತು ಫೋಗಟ್ ಹಾಗೂ ಪಿಂಕಿ ಹೋರಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News