ಮುಂದುವರೆದ ಬಿಪಿಎಲ್ ಪಡಿತರ ಚೀಟಿ ಗೊಂದಲ: ಕಾರ್ಡ್ ವಿತರಣೆಯ ಕುರಿತಂತೆ ಸರಕಾರದಿಂದ ಬಂದಿಲ್ಲ ಮಾಹಿತಿ

Update: 2018-09-17 18:29 GMT

ಶಿವಮೊಗ್ಗ, ಸೆ. 17: ಸದ್ಯ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸರಕಾರ ಉಳಿಯುತ್ತಾ? ಉರುಳುತ್ತಾ? ಎಂಬ ಚರ್ಚೆಗಳು ನಡೆಯಲಾರಂಭಿಸಿವೆ. ಈ ನಡುವೆ ಸರಕಾರದ ಅತಂತ್ರ ಸ್ಥಿತಿಯ ಕಾರಣದಿಂದ, ಜ್ವಲಂತ ಸಮಸ್ಯೆಗಳ ಪರಿಹಾರದತ್ತ ಆಡಳಿತ ವ್ಯವಸ್ಥೆ ಗಂಭೀರ ಚಿತ್ತ ಹರಿಸದಂತಾಗಿದೆ. ಇದಕ್ಕೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಇಲ್ಲಿಯವರೆಗೂ ಟೇಕಾಫ್ ಆಗದಿರುವುದೇ ತಾಜಾ ನಿದರ್ಶನವಾಗಿದೆ.

ಹೌದು. ಕಳೆದ ವಿಧಾನಸಭೆ ಚುನಾವಣೆ ವೇಳೆ ಸ್ಥಗಿತಗೊಳಿಸಲಾಗಿದ್ದ, ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಲ್ಲಿಯವರೆಗೂ ಆರಂಭವಾಗಿಲ್ಲ. ಸರಕಾರ ರಚನೆಗೊಂಡು ನೂರು ದಿನ ಪೂರೈಸಿದರೂ, ಈಗಾಗಲೇ ಸೂಕ್ತ ದಾಖಲಾತಿಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್ ವಿತರಣೆಯ ಕುರಿತಂತೆ ಸರಕಾರದಿಂದ ಯಾವುದೇ ಸ್ಪಷ್ಟ ಆದೇಶ ಹೊರಬಿದ್ದಿಲ್ಲ. ಈ ಕಾರಣದಿಂದ ರಾಜ್ಯಾದ್ಯಂತ ಆಹಾರ ಇಲಾಖೆಯ ಅಧಿಕಾರಿಗಳು, ಬಿಪಿಎಲ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಸರಕಾರದ ನಿರ್ದೇಶನಕ್ಕಾಗಿ ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ನಾಗರಿಕರು ದಿನಂಪ್ರತಿ ಆಹಾರ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದು, ಸ್ಪಷ್ಟ ಮಾಹಿತಿಯಿಲ್ಲದೆ ಪರಿತಪಿಸುವಂತಾಗಿದೆ.

ಆಮೂಲಾಗ್ರ ಬದಲಾವಣೆ: ಈ ಹಿಂದಿನ ಕಾಂಗ್ರೆಸ್ ಸರಕಾರವು ಬಿಪಿಎಲ್ ಪಡಿತರ ಚೀಟಿ ವಿತರಣೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿತ್ತು. ಅರ್ಜಿ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಮಾನದಂಡಗಳನ್ನು ಪರಿಷ್ಕರಿಸಿತ್ತು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಅರ್ಹ ಅರ್ಜಿದಾರರ ಮನೆಗೆ ಅಂಚೆಯ ಮೂಲಕ ಪಡಿತರ ಚೀಟಿ ತಲುಪಿಸುವ ವ್ಯವಸ್ಥೆ ಕಾರ್ಯಗತಗೊಳಿಸಿತ್ತು. ಅಂದು ಆಹಾರ ಸಚಿವರಾಗಿದ್ದ ಯು.ಟಿ.ಖಾದರ್ ವಿಶೇಷ ಆಸಕ್ತಿವಹಿಸಿ, ಬಿಪಿಎಲ್ ಪಡಿತರ ಚೀಟಿ ನೀಡಿಕೆಯಲ್ಲಿನ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿದ್ದರು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ, ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಕಾರ್ಡ್ ನೀಡುವ ವಿನೂತನ ಯೋಜನೆ ಕಾರ್ಯಗತಗೊಳಿಸಿದ್ದರು.

ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ದಾಖಲೆಗೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅರ್ಜಿದಾರರು ಆದಾಯ ಪ್ರಮಾಣ ಪತ್ರದೊಂದಿಗೆ ಸಂಬಂಧಿಸಿದ ಆಹಾರ ಇಲಾಖೆ ಕಚೇರಿಗೆ ತೆರಳಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿತ್ತು. ಅದರಂತೆ ರಾಜ್ಯಾದ್ಯಂತ ಸಾವಿರಾರು ಫಲಾನುಭವಿಗಳು, ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಪಡಿತರ ಚೀಟಿ ಪಡೆದುಕೊಂಡಿದ್ದರು. ಈ ನಡುವೆ ಕಳೆದ ಎಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ-ಸಂಹಿತೆ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ, ಬಿಪಿಎಲ್ ಪಡಿತರ ಚೀಟಿ ವಿತರಣೆ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.

ಇದಾದ ನಂತರ ರಾಜ್ಯದ ವಿವಿಧೆಡೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳು ಆರಂಭವಾದವು. ಈ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿತ್ತು. ಈ ಎಲ್ಲ ಕಾರಣಗಳಿಂದ ಬಿಪಿಎಲ್ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಪುನಾರಾರಂಭಗೊಂಡಿರಲಿಲ್ಲ.

ಅವಕಾಶ: ಈ ನಡುವೆ ಕಳೆದ ಒಂದು ತಿಂಗಳನಿಂದ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ನಾಗರಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾರಂಭಿಸಿದ್ದಾರೆ. ಆದರೆ ಅರ್ಹ ಫಲಾನುಭವಿಗಳಿಗೆ ಇಲ್ಲಿಯವರೆಗೂ ಬಿಪಿಎಲ್ ಕಾರ್ಡ್ ವಿತರಣೆ ಆರಂಭಿಸಲು ಸರಕಾರ ಸೂಕ್ತ ಕ್ರಮಕೈಗೊಂಡಿಲ್ಲ. ಈ ಕುರಿತಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಯಾವುದೇ ಸೂಕ್ತ ನಿರ್ದೇಶನ ರವಾನಿಸಿಲ್ಲವಾಗಿದೆ. ಬಿಪಿಎಲ್ ಪಡಿತರ ಚೀಟಿ ಮುದ್ರಿಸಿಕೊಡುವ ಲಿಂಕ್‌ನ್ನು ಇತ್ತೀಚೆಗೆ ಮುಕ್ತಗೊಳಿಸಲಾಗಿದೆ. ಆದರೆ ಅರ್ಹರಿಗೆ ಪಡಿತರ ಚೀಟಿ ವಿತರಿಸುವ ಕುರಿತಂತೆ ಸರಕಾರದಿಂದ ಯಾವುದೇ ಸೂಕ್ತ ನಿರ್ದೇಶನವಾಗಲಿ ಅಥವಾ ಆದೇಶವಾಗಲಿ ಬಂದಿಲ್ಲ. ಈ ಕಾರಣದಿಂದ ಪಡಿತರ ಚೀಟಿ ವಿತರಣೆ ಮಾಡುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಆಹಾರ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಒಟ್ಟಾರೆ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ನಾಗರಿಕರ ಪಡಿಪಾಟಲು ತಪ್ಪಿಲ್ಲ. ಇನ್ನಾದರೂ ಆಹಾರ ಸಚಿವ ಝಮೀರ್ ಅಹಮದ್ ಇತ್ತ ಗಮನಹರಿಸಬೇಕು. ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಆದೇಶ, ನಿರ್ದೇಶನ ಹೊರಡಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸರಕಾರ ಅತಂತ್ರದ ಕರಿನೆರಳು?

ಕಳೆದ ಐದಾರು ತಿಂಗಳಿನಿಂದ ವಿಧಾನಸಭೆ, ವಿಧಾನ ಪರಿಷತ್ ಹಾಗೂ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾರಣದಿಂದ ಬಿಪಿಎಲ್ ಪಡಿತರ ಚೀಟಿ ವಿತರಣೆಯ ಮೇಲೆ ಪರಿಣಾಮ ಬೀರುವಂತಾಗಿತ್ತು.ಸದ್ಯ ಮೈತ್ರಿ ಸರಕಾರದಲ್ಲಿ ಉಂಟಾಗಿರುವ ಗೊಂದಲ, ಗಡಿಬಿಡಿಯು ಬಿಪಿಎಲ್ ಪಡಿತರ ಚೀಟಿ ವಿತರಣೆ ಮೇಲೆ ಕರಿನೆರಳು ಬೀರುವಂತಾಗಿದೆ. ಅಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನಾದರೂ ಇತ್ತ ಚಿತ್ತ ಹರಿಸಬೇಕು. ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಎದುರಾಗಿರುವ ಅಡೆತಡೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು ಎಂದು ಅರ್ಜಿದಾರರು ಆಗ್ರಹಿಸುತ್ತಾರೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News